
ನವದೆಹಲಿ, 14 ಆಗಸ್ಟ್ (ಹಿ.ಸ.):
ಆ್ಯಂಕರ್:
‘ವರ್ಕ್ ಫ್ರಮ್ ಹೋಮ್’ ಉದ್ಯೋಗದ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಚೀನಾಕ್ಕೆ ಸಂಪರ್ಕ ಹೊಂದಿದ್ದ ಸೈಬರ್ ವಂಚನೆ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಬ್ಯಾಂಕ್ ಖಾತೆ ಒದಗಿಸುತ್ತಿದ್ದವರು, ಖಾತೆ ನಿರ್ವಹಿಸುತ್ತಿದ್ದವರು, ಮಧ್ಯವರ್ತಿ ಹಾಗೂ ಖಾತೆದಾರ ಎಂದು ಪೊಲೀಸರು ತಿಳಿಸಿದ್ದಾರೆ. ಚೀನಾದಲ್ಲಿ ಕುಳಿತಿದ್ದ ಸೈಬರ್ ವಂಚಕರಿಗೆ ಆರೋಪಿಗಳು ‘ಮ್ಯೂಲ್’ ಬ್ಯಾಂಕ್ ಖಾತೆಗಳನ್ನು ಒದಗಿಸುತ್ತಿದ್ದರು. ವಂಚನೆಯ ಹಣವನ್ನು ಹಲವು ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ ಬಳಿಕ ಕ್ರಿಪ್ಟೊ ಕರೆನ್ಸಿಯಾಗಿ ಪರಿವರ್ತಿಸಿ ಹಣದ ಮೂಲವನ್ನು ಮರೆಮಾಚಲು ಯತ್ನಿಸುತ್ತಿದ್ದರು.
ಜುಲೈ 17ರಂದು ದೆಹಲಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಟೆಲಿಗ್ರಾಂ ಮೂಲಕ ‘ವರ್ಕ್ ಫ್ರಮ್ ಹೋಮ್’ ಕೆಲಸದ ಆಮಿಷವೊಡ್ಡಿ, ಆನ್‌ಲೈನ್ ಕಾರ್ಯ ಪೂರ್ಣಗೊಳಿಸಲು ಭದ್ರತಾ ಠೇವಣಿ ಪಾವತಿಸುವಂತೆ ಸಂತ್ರಸ್ತನಿಗೆ ಸೂಚಿಸಲಾಗಿತ್ತು. ಹಣ ಹಿಂಪಡೆಯಲು ಮುಂದಾದಾಗ ವಿವಿಧ ಕಾರಣಗಳನ್ನು ನೀಡಿ ಮತ್ತಷ್ಟು ಹಣ ಪಾವತಿಸುವಂತೆ ಒತ್ತಾಯಿಸಲಾಗಿತ್ತು. ಈ ರೀತಿ ಸಂತ್ರಸ್ತನಿಂದ ಒಟ್ಟು 12 ಲಕ್ಷ ರೂ. ವಂಚಿಸಲಾಗಿತ್ತು.
ತನಿಖೆ ವೇಳೆ ವಂಚನೆಗೆ ಬಳಸಿದ ಟೆಲಿಗ್ರಾಂ ಖಾತೆಗಳ ಅಂತರ್ಜಾಲ ವಿಳಾಸಗಳು ಚೀನಾದಲ್ಲಿ ಗುರುತಿಸಲ್ಪಟ್ಟಿವೆ. ಹಣದ ವಹಿವಾಟಿನ ಜಾಡು ಹಿಡಿದ ಪೊಲೀಸರು ಗಗನ್ ಯಾದವ್ ಅವರ ಬ್ಯಾಂಕ್ ಖಾತೆಗೆ ವಂಚನೆಯ ಹಣದ ಒಂದು ಭಾಗ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿದರು.
ತಾಂತ್ರಿಕ ನಿಗಾ ಆಧಾರದ ಮೇಲೆ ಗುರುಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ ಮೀರಠ್ ಮೂಲದ ಗೀತಂ ಸಿಂಗ್‌ನನ್ನು ಬಂಧಿಸಲಾಯಿತು. ಆತ ಚೀನಾದಲ್ಲಿದ್ದ ಸೈಬರ್ ವಂಚಕರಿಗೆ ಬ್ಯಾಂಕ್ ಖಾತೆಗಳನ್ನು ಒದಗಿಸಿ, ವಂಚನೆಯ ಹಣವನ್ನು ಕ್ರಿಪ್ಟೊ ಕರೆನ್ಸಿಗೆ ಪರಿವರ್ತಿಸುತ್ತಿದ್ದ ಎನ್ನಲಾಗಿದೆ. ಆತನ ಮೊಬೈಲ್, ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಸಂಭಾಷಣೆಗಳಲ್ಲಿ ಚೀನಾದ ಸೈಬರ್ ವಂಚಕರೊಂದಿಗೆ ನೇರ ಸಂಪರ್ಕ ಇರುವುದು ಪತ್ತೆಯಾಗಿದೆ.
ಗೀತಂ ನೀಡಿದ ಮಾಹಿತಿಯ ಆಧಾರದ ಮೇಲೆ ಗಾಜಿಯಾಬಾದ್‌ನಲ್ಲಿ 21 ವರ್ಷದ ಧ್ರುವನನ್ನು ಬಂಧಿಸಲಾಯಿತು. ಆತನಿಂದ ಒಂಬತ್ತು ಬ್ಯಾಂಕ್ ಪಾಸ್‌ಬುಕ್‌ಗಳು, ಐದು ಸಿಮ್ ಕಾರ್ಡ್‌ಗಳು, ಮೊಬೈಲ್ ಫೋನ್ ಹಾಗೂ ಬ್ಯಾಂಕ್ ಖಾತೆಗಳನ್ನು ಒದಗಿಸಿದ್ದಕ್ಕಾಗಿ ಪಡೆದ ಕಮಿಷನ್‌ನ ಲೆಕ್ಕಪತ್ರದ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ.
ಧ್ರುವನ ವಿಚಾರಣೆಯಲ್ಲಿ ಅನುಜ್ ಶರ್ಮಾ, ಗಗನ್ ಯಾದವ್ ಅವರ ಬ್ಯಾಂಕ್ ಖಾತೆ ತೆರೆಯಲು ನೆರವಾಗಿದ್ದಾನೆ ಎಂಬುದು ತಿಳಿದುಬಂದಿದೆ. ಬಳಿಕ ನೋಯ್ಡಾದಿಂದ 27 ವರ್ಷದ ಅನುಜ್ ಶರ್ಮಾನನ್ನು ಬಂಧಿಸಲಾಯಿತು. ಆತನ ಮೊಬೈಲ್‌ನಲ್ಲಿ ಕಮಿಷನ್ ಪಾವತಿಗೆ ಸಂಬಂಧಿಸಿದ ಸಂಭಾಷಣೆಗಳು ಪತ್ತೆಯಾಗಿವೆ. ನಂತರ ಇಟಾವಾದಲ್ಲಿ ಕಾರ್ಯಾಚರಣೆ ನಡೆಸಿ 26 ವರ್ಷದ ಗಗನ್ ಯಾದವ್‌ನನ್ನು ಬಂಧಿಸಲಾಯಿತು. ತನ್ನ ಬ್ಯಾಂಕ್ ಖಾತೆಯನ್ನು ವಂಚನೆ ಜಾಲಕ್ಕೆ ಒದಗಿಸಿ ಕಮಿಷನ್ ಪಡೆಯುತ್ತಿದ್ದುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೀನಾದಲ್ಲಿರುವ ವಂಚಕರು ಟೆಲಿಗ್ರಾಂ ಮೂಲಕ ಆಕರ್ಷಕ ಉದ್ಯೋಗದ ಆಮಿಷವೊಡ್ಡಿ, ಮೊದಲು ಭದ್ರತಾ ಠೇವಣಿ ಹಾಗೂ ಬಳಿಕ ಹೆಚ್ಚಿನ ಲಾಭದ ಆಸೆ ತೋರಿಸಿ ನಿರಂತರವಾಗಿ ಹಣ ಪಡೆದುಕೊಳ್ಳುತ್ತಿದ್ದರು. ಆರೋಪಿಗಳು ಬ್ಯಾಂಕ್ ಖಾತೆ ಮತ್ತು ಸಿಮ್ ಕಾರ್ಡ್‌ಗಳನ್ನು ಒದಗಿಸುವುದು, ವಂಚನೆಯ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸುವುದು ಹಾಗೂ ಕ್ರಿಪ್ಟೊ ಕರೆನ್ಸಿಗೆ ಪರಿವರ್ತಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು.
ಗ್ಯಾಂಗ್‌ನ ಇತರ ಸದಸ್ಯರು, ವಂಚನೆಯ ಹಣದ ಜಾಡು ಹಾಗೂ ಅಂತಾರಾಷ್ಟ್ರೀಯ ಜಾಲದೊಂದಿಗೆ ಸಂಪರ್ಕ ಹೊಂದಿರುವವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.