
ನವದೆಹಲಿ, 14 ಆಗಸ್ಟ್ (ಹಿ.ಸ.):
ಆ್ಯಂಕರ್:
ಕೇಂದ್ರ ಸರ್ಕಾರವು ಜನಗಣತಿ 2027ರ ಎರಡನೇ ಹಂತವಾದ ಜನಸಂಖ್ಯಾ ಗಣತಿಗೆ ಸಂಬಂಧಿಸಿದ 40 ಪ್ರಶ್ನೆಗಳ ಪ್ರಶ್ನಾವಳಿಯನ್ನು ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ.
ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತದ ಮಹಾ ನೋಂದಣಾಧಿಕಾರಿ ಹಾಗೂ ಜನಗಣತಿ ಆಯುಕ್ತರು ಹೊರಡಿಸಿರುವ ಅಧಿಸೂಚನೆಯಂತೆ, ಜನಗಣತಿ ಅಧಿಕಾರಿಗಳು ಕುಟುಂಬಗಳಿಂದ 40 ಅಂಶಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಿದ್ದಾರೆ.
ಪ್ರಶ್ನಾವಳಿಯಲ್ಲಿ ವ್ಯಕ್ತಿಯ ಹೆಸರು, ಕುಟುಂಬದ ಮುಖ್ಯಸ್ಥರೊಂದಿಗಿನ ಸಂಬಂಧ, ಲಿಂಗ, ಜನ್ಮ ದಿನಾಂಕ, ವಯಸ್ಸು, ವೈವಾಹಿಕ ಸ್ಥಿತಿ, ವಿವಾಹದ ಸಮಯದ ವಯಸ್ಸು, ಪತಿ ಅಥವಾ ಪತ್ನಿಯ ಹೆಸರು ಹಾಗೂ ಘೋಷಿತ ರಾಷ್ಟ್ರೀಯತೆ ಸೇರಿದಂತೆ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತದೆ.
ಧರ್ಮ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಜಾತಿ, ತಂದೆ-ತಾಯಿ ವಿವರ, ಅಂಗವೈಕಲ್ಯ, ಮಾತೃಭಾಷೆ, ಇತರ ಭಾಷೆಗಳ ಜ್ಞಾನ, ಸಾಕ್ಷರತೆ, ಡಿಜಿಟಲ್ ಸಾಕ್ಷರತೆ ಹಾಗೂ ಶೈಕ್ಷಣಿಕ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಥಿತಿಯ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ. ಗರಿಷ್ಠ ಶೈಕ್ಷಣಿಕ ಅರ್ಹತೆ ಮತ್ತು ಅಧ್ಯಯನ ಮಾಡಿದ ವಿಷಯ ಅಥವಾ ವಿಭಾಗದ ಕುರಿತ ಪ್ರಶ್ನೆಗಳೂ ಇವೆ.
ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳ ಕುರಿತು ಕಳೆದ ಒಂದು ವರ್ಷದಲ್ಲಿ ಕೆಲಸ ಮಾಡಿದ್ದಾರೆಯೇ, ಆರ್ಥಿಕ ಚಟುವಟಿಕೆಯ ವರ್ಗ, ಉದ್ಯೋಗ, ಕೈಗಾರಿಕೆ, ವ್ಯಾಪಾರ ಅಥವಾ ಸೇವೆಯ ಸ್ವರೂಪ ಹಾಗೂ ಕಾರ್ಮಿಕರ ವರ್ಗದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಉದ್ಯೋಗವಿಲ್ಲದವರು ಮತ್ತು ಅಲ್ಪಾವಧಿ ಅಥವಾ ಅರೆಕಾಲಿಕ ಕಾರ್ಮಿಕರಿಂದ ಕೆಲಸದ ಹುಡುಕಾಟ ಹಾಗೂ ಕೆಲಸಕ್ಕೆ ಲಭ್ಯತೆಯ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ.
ಕೆಲಸದ ಸ್ಥಳಕ್ಕೆ ಪ್ರಯಾಣ, ಜನ್ಮಸ್ಥಳ, ಹಿಂದಿನ ವಾಸಸ್ಥಳ, ಸ್ಥಳಾಂತರದ ಕಾರಣ, ಹಿಂದಿನ ವಲಸೆಯ ನಂತರ ಗ್ರಾಮ ಅಥವಾ ನಗರದಲ್ಲಿ ವಾಸಿಸಿದ ಅವಧಿ ಹಾಗೂ ಶಾಶ್ವತ ನಿವಾಸದ ವಿಳಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇವೆ. ಪ್ರಸ್ತುತ ವಿವಾಹಿತ, ವಿಧವೆ, ವಿಚ್ಛೇದಿತ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯರಿಂದ ಜೀವಂತ ಮಕ್ಕಳ ಸಂಖ್ಯೆ ಮತ್ತು ಇದುವರೆಗೆ ಜೀವಂತವಾಗಿ ಜನಿಸಿದ ಮಕ್ಕಳ ಸಂಖ್ಯೆಯ ಮಾಹಿತಿಯನ್ನೂ ಪಡೆಯಲಾಗುತ್ತದೆ.
ಇದರ ಜತೆಗೆ ಕೋವಿಡ್-19 ಲಸಿಕೆ ಪಡೆದ ಸ್ಥಳ, ಹೊಂದಿರುವ ಬ್ಯಾಂಕ್ ಖಾತೆಗಳ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಲಭ್ಯವಿದ್ದಲ್ಲಿ ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ ಪಾಸ್‌ಪೋರ್ಟ್ ಸಂಖ್ಯೆ ಮತ್ತು ಚಾಲನಾ ಪರವಾನಗಿ ಹೊಂದಿರುವ ಬಗ್ಗೆ ಮಾಹಿತಿ ಕೂಡ ಪ್ರಶ್ನಾವಳಿಯಲ್ಲಿ ಸೇರಿಸಲಾಗಿದೆ.
ಜನಗಣತಿ 2027 ಅನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದ್ದು, ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ. ಎರಡನೇ ಹಂತದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹಾಗೂ ಕುಟುಂಬದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಜನಸಂಖ್ಯಾ ವಿವರಗಳನ್ನು ಸಂಗ್ರಹಿಸಲು ಈ ಪ್ರಶ್ನಾವಳಿ ಆಧಾರವಾಗಲಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.