
ನವದೆಹಲಿ, 14 ಆಗಸ್ಟ್ (ಹಿ.ಸ.):
ಆ್ಯಂಕರ್:
ವಿಭಜನೆಯ ಕರಾಳ ದಿನ ಸ್ಮರಣಾ ದಿನ’ದ ಅಂಗವಾಗಿ ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರು ಹಾಗೂ ಹಿಂಸೆ, ಸ್ಥಳಾಂತರದ ನೋವು ಅನುಭವಿಸಿದ ಕುಟುಂಬಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ವಿಭಜನೆಯ ದುರಂತವನ್ನು ಭಾರತದ ಇತಿಹಾಸದ ನೋವಿನ ಅಧ್ಯಾಯ ಎಂದು ಬಣ್ಣಿಸಿ, ಅದರಿಂದ ಪಾಠ ಕಲಿತು ರಾಷ್ಟ್ರೀಯ ಏಕತೆ, ಅಖಂಡತೆ ಮತ್ತು ಸಾಮಾಜಿಕ ಸೌಹಾರ್ದವನ್ನು ಬಲಪಡಿಸುವಂತೆ ಕರೆ ನೀಡಿದರು.
ಅಮಿತ್ ಶಾ ಅವರು, 1947ರ ಆಗಸ್ಟ್ 14ರಂದು ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದು, ಕೋಟ್ಯಂತರ ಜನರು ಮನೆ, ಆಸ್ತಿ ಹಾಗೂ ಬಂಧುಗಳನ್ನು ತೊರೆದು ನಿರಾಶ್ರಿತರಾಗಬೇಕಾಯಿತು ಎಂದು ಸ್ಮರಿಸಿದರು. ವಿಭಜನೆಯ ದುರಂತದ ಸ್ಮೃತಿಯನ್ನು ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸ್ಮರಣಾ ದಿನ ಆಚರಿಸಲಾಗುತ್ತಿದೆ ಎಂದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ವಿಭಜನೆಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ನೋವು, ಸ್ಥಳಾಂತರ ಮತ್ತು ಅನಿಶ್ಚಿತತೆಯನ್ನು ಸ್ಮರಿಸುವ ದಿನ ಇದಾಗಿದೆ. ಎಲ್ಲವನ್ನೂ ಕಳೆದುಕೊಂಡರೂ ಜೀವನವನ್ನು ಪುನರ್‌ನಿರ್ಮಿಸಿಕೊಂಡ ಜನರ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಬೇಕು ಎಂದರು.
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, 1947ರ ವಿಭಜನೆಯನ್ನು ವಿಶ್ವ ಇತಿಹಾಸದ ಕರಾಳ ಅಧ್ಯಾಯ ಎಂದು ಬಣ್ಣಿಸಿ, ದ್ವೇಷ ಮತ್ತು ಹಿಂಸೆಯಿಂದ ಲಕ್ಷಾಂತರ ಜನರು ಸ್ಥಳಾಂತರದ ನೋವು ಅನುಭವಿಸಿದರು. ದೇಶದ ಏಕತೆ ಹಾಗೂ ಸಾಮಾಜಿಕ ಸೌಹಾರ್ದವನ್ನು ಬಲಪಡಿಸುವ ಸಂಕಲ್ಪ ಮಾಡಬೇಕು ಎಂದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಧರ್ಮದ ಆಧಾರದ ಮೇಲೆ ನಡೆದ ವಿಭಜನೆ ಭಾರತೀಯ ಇತಿಹಾಸದ ಅಮಾನವೀಯ ಅಧ್ಯಾಯ ಎಂದು ಹೇಳಿದರು. ವಿಭಜನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು, ರಾಜಕೀಯ ಆಶಯಗಳು ಹಾಗೂ ಸಂಕುಚಿತ ವಿಚಾರಧಾರೆಗಳಿಂದ ಉಂಟಾದ ವಿಭಜನೆಯು ರಕ್ತಪಾತ, ದ್ವೇಷ ಮತ್ತು ಸ್ಥಳಾಂತರದ ಮೂಲಕ ಸಮಾಜಕ್ಕೆ ಆಳವಾದ ಗಾಯ ಮಾಡಿತು ಎಂದರು. ಜ್ಯೋತಿರಾದಿತ್ಯ ಸಿಂಧಿಯಾ ಅವರು ಮನೆ, ಬೇರುಗಳು ಹಾಗೂ ಆತ್ಮೀಯರನ್ನು ಕಳೆದುಕೊಂಡವರ ಧೈರ್ಯ ಮತ್ತು ಹೋರಾಟವನ್ನು ಸ್ಮರಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೂಡ ವಿಭಜನೆಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮಾನವೀಯತೆ, ರಾಷ್ಟ್ರೀಯ ಏಕತೆ, ಅಖಂಡತೆ ಮತ್ತು ಸಹೋದರತ್ವವನ್ನು ಬಲಪಡಿಸುವುದು ಇಂದಿನ ಅಗತ್ಯ ಎಂದು ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.