

ಬೆಂಗಳೂರು, 09 ಜುಲೈ (ಹಿ.ಸ.)
ಆ್ಯಂಕರ್:
ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೈಗೊಂಡಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಅಭಿಯಾನದಡಿ ಜುಲೈ 1ರಿಂದ 8ರವರೆಗೆ ಒಟ್ಟು 430 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.
ಈ ಅಭಿಯಾನವನ್ನು ಜಿಬಿಎ ಕೇಂದ್ರ, ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ಮಹಾನಗರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ನಗರದಲ್ಲಿ ಸ್ವಚ್ಛ, ವ್ಯವಸ್ಥಿತ ಹಾಗೂ ಪಾದಚಾರಿ ಸ್ನೇಹಿ ವಾತಾವರಣ ನಿರ್ಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ವಲಯವಾರು ಅಂಕಿಅಂಶಗಳ ಪ್ರಕಾರ, ಪಶ್ಚಿಮ ವಲಯದಲ್ಲಿ ಅತಿಹೆಚ್ಚು 115.02 ಕಿ.ಮೀ. ಫುಟ್ಪಾತ್ ತೆರವುಗೊಳಿಸಲಾಗಿದ್ದು, ಉತ್ತರ ವಲಯದಲ್ಲಿ 104.15 ಕಿ.ಮೀ., ದಕ್ಷಿಣ ವಲಯದಲ್ಲಿ 80.06 ಕಿ.ಮೀ., ಪೂರ್ವ ವಲಯದಲ್ಲಿ 69.32 ಕಿ.ಮೀ. ಹಾಗೂ ಕೇಂದ್ರ ವಲಯದಲ್ಲಿ 61.45 ಕಿ.ಮೀ. ಫುಟ್ಪಾತ್ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.
ಈ ಕಾರ್ಯಾಚರಣೆಯಿಂದ ಪಾದಚಾರಿಗಳಿಗೆ ಮೀಸಲಾದ ಸ್ಥಳವನ್ನು ಮರುಸ್ಥಾಪಿಸುವುದರ ಜೊತೆಗೆ ರಸ್ತೆ ಸುರಕ್ಷತೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ನಗರ ಸ್ವಚ್ಛತೆಗೂ ಉತ್ತೇಜನ ಸಿಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.
ಮುಕ್ತವಾಗಿ ನಡೆಯಿರಿ. ಉತ್ತಮವಾಗಿ ಜೀವಿಸಿ..ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಅಭಿಯಾನಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಪ್ರಾಧಿಕಾರ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / SNEHA K