
ಗದಗ, 09 ಜುಲೈ (ಹಿ.ಸ.)
ಆ್ಯಂಕರ್:- ಬಸವಾದಿ ಶಿವಶರಣರು ಜಗತ್ತಿಗೆ ನೀಡಿದ ಕಾಯಕ, ಸಮಾನತೆ ಮತ್ತು ದಾಸೋಹದ ಮೌಲ್ಯಗಳು ಇಂದಿಗೂ ಮಾನವ ಸಮಾಜಕ್ಕೆ ದಾರಿದೀಪವಾಗಿವೆ. ವಚನಸಾಹಿತ್ಯದಲ್ಲಿ ಜಗತ್ತಿನ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಅಡಗಿದ್ದು, ಅದರ ಸಂದೇಶಗಳನ್ನು ಅಳವಡಿಸಿಕೊಂಡರೆ ವಿಶ್ವಶಾಂತಿ ಸಾಧಿಸುವುದು ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗದಗದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ ಆಯೋಜಿಸಿದ್ದ 2805ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಾದಿ ಶಿವಶರಣರ ವಚನಗಳು ಕೇವಲ ಧಾರ್ಮಿಕ ಸಂದೇಶಗಳಲ್ಲ, ಅವು ಮಾನವೀಯತೆಯ ಮಹಾಗ್ರಂಥಗಳಾಗಿವೆ ಎಂದರು. ಜಾತಿ, ಮತ, ಪಂಥ, ಭೇದಭಾವ ಮತ್ತು ಮೌಢ್ಯತೆಗಳನ್ನು ದೂರ ಮಾಡುವ ಶಕ್ತಿ ವಚನಗಳಲ್ಲಿ ಇದೆ. ಮಾನವಕುಲ ಒಂದೇ ಎಂಬ ಭಾವನೆಯನ್ನು ಬಿತ್ತುವ ಈ ಸಾಹಿತ್ಯವು ಸಕಲ ಜೀವಿಗಳ ಹಿತವನ್ನು ಬಯಸುತ್ತದೆ ಎಂದು ಹೇಳಿದರು.
ಶಾಂತಿ, ನೆಮ್ಮದಿ ಮತ್ತು ಸಹಬಾಳ್ವೆಯಿಂದ ಬದುಕಬೇಕಾದರೆ ಪರಸ್ಪರ ಸಹಕಾರ ಅತ್ಯಂತ ಮುಖ್ಯ. ಸಹಕಾರವಿಲ್ಲದೆ ಯಾವುದೇ ಸಮಾಜ ಅಥವಾ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. ಸಹಕಾರ ಕ್ಷೇತ್ರದಲ್ಲಿ ಅನೇಕ ಮಹನೀಯರು ಸಾಧನೆಗೈದಿದ್ದಾರೆ. ಪ್ರಕೃತಿಯಲ್ಲಿಯೇ ಚರಾಚರ ವಸ್ತುಗಳು ಪರಸ್ಪರ ಸಹಕಾರದ ಮೇಲೆ ನಿಂತಿವೆ. ಆ ಸಹಕಾರ ಕಡಿತವಾದಾಗ ಮಾತ್ರ ಬದುಕು ದುಸ್ಥರವಾಗುತ್ತದೆ ಎಂದು ಮಹಾಸ್ವಾಮಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಕೆಸಿಸಿ ಬ್ಯಾಂಕಿನ ನಿವೃತ್ತ ಅಧಿಕಾರಿಗಳಾದ ಮುಂಡರಗಿಯ ಎಸ್.ವಿ. ಪಾಟೀಲ, ವಿಶ್ವಮಟ್ಟದಲ್ಲಿ ಸಹಕಾರ ಚಳುವಳಿ ಹೇಗೆ ಬೆಳೆದುಬಂದಿತು, ಭಾರತದಲ್ಲಿ ಅದು ಯಾವ ರೀತಿಯಲ್ಲಿ ವ್ಯಾಪಿಸಿತು ಹಾಗೂ ಕರ್ನಾಟಕದಲ್ಲಿ ಅದರ ಇಂದಿನ ಸ್ಥಿತಿ ಏನು ಎಂಬುದರ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ಸಹಕಾರ ಚಳುವಳಿ ಗ್ರಾಮೀಣ ಆರ್ಥಿಕತೆ ಹಾಗೂ ಸಾಮಾಜಿಕ ಏಕತೆಯನ್ನು ಬಲಪಡಿಸುವ ಮಹತ್ವದ ಸಾಧನವಾಗಿದೆ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿದ ಶಿವಸಂಗಮ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಮಾತನಾಡಿ, ಸಹಕಾರ ಎಂಬುದು ಮಾನವನ ದೇಹದ ಅಂಗಾಂಗಗಳಲ್ಲಿಯೇ ಅಡಕವಾಗಿದೆ. ದೇಹದ ಯಾವುದಾದರೂ ಅಂಗವು ಸಹಕಾರ ನೀಡದಿದ್ದರೆ ದೇಹದ ಕಾರ್ಯಗಳು ಸರಿಯಾಗಿ ನಡೆಯುವುದಿಲ್ಲ. ಇದೇ ತತ್ವ ಸಮಾಜ ಹಾಗೂ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಚೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಗದುಗಿನ ಸ್ವಾತಿ ಕರಮುಡಿ, ವಿರೂಪಾಕ್ಷಪ್ಪ ನವಲಗುಂದ, ಪೂಜಾ ಗುಗ್ಗರಿ ಹಾಗೂ ರೋಹನ್ ಜೋಗಿನ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಯಿಪ್ರಸಾದ ಬಡಿಗೇರ ಮತ್ತು ಗುರುನಾಥ ಸುತಾರ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಖುಷಿ ಕಟ್ಟೆಕಾರ ಧರ್ಮಗ್ರಂಥ ಪಠಣ ಮಾಡಿದರು. ಕೋಮಲ ಮುಗಳಿ ವಚನಚಿಂತನ ಪ್ರಸ್ತುತಪಡಿಸಿದರು. ದಾಸೋಹ ಸೇವೆಯನ್ನು ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಮತ್ತು ಅವರ ಪರಿವಾರ ಹಾಗೂ ಕೊಟ್ರೇಶ ದಾನಪ್ಪ ಮೆಣಸಿನಕಾಯಿ ಮತ್ತು ಪರಿವಾರ ವಹಿಸಿಕೊಂಡಿದ್ದರು.
ಶಿವಾನುಭವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಅಧ್ಯಕ್ಷ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಶ್ರೀಮತಿ ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP