
ಬೆಂಗಳೂರು, 09 ಜುಲೈ (ಹಿ.ಸ.):
ಆ್ಯಂಕರ್
ತಾಂತ್ರಿಕ ದೋಷದಿಂದಾಗಿ ಗುರುವಾರ ಬೆಳಗ್ಗೆ ನಮ್ಮ ಮೆಟ್ರೋದ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಪ್ರಯಾಣಿಕರು 20ರಿಂದ 30 ನಿಮಿಷಗಳವರೆಗೆ ಕಾಯುವ ಪರಿಸ್ಥಿತಿ ಎದುರಿಸಿದರು.
ಬೆಳಗ್ಗೆ 8.23ರಿಂದ 8.38ರವರೆಗೆ ಗ್ರೀನ್ ಲೈನ್ನ ಒಂದು ವಿಭಾಗದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ ರೈಲುಗಳನ್ನು ನಿರ್ಬಂಧಿತ ವೇಗದಲ್ಲಿ ಸಂಚರಿಸಲಾಯಿತು. ಇದರಿಂದ ಬೆಳಗ್ಗೆ 8.45ರಿಂದ ಹಸಿರು ಮಾರ್ಗದಲ್ಲಿ ರೈಲುಗಳ ಸಂಚಾರ ವಿಳಂಬವಾಯಿತು.
ಕೆಲವು ನಿಲ್ದಾಣಗಳಲ್ಲಿ ರೈಲುಗಾಗಿ ದೀರ್ಘಕಾಲ ಕಾಯಬೇಕಾಯಿತು ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕೊಣನಕುಂಟೆ ನಿಲ್ದಾಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರೈಲು ಆಗಮಿಸಲಿಲ್ಲ ಹಾಗೂ ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಪ್ರತಿಕ್ರಿಯಿಸಿ, ತಾಂತ್ರಿಕ ತಂಡ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಕೆಲಕಾಲ ರೈಲುಗಳನ್ನು ನಿರ್ಬಂಧಿತ ವೇಗದಲ್ಲಿ ಓಡಿಸಲಾಗಿದೆ ಎಂದು ತಿಳಿಸಿತು.
ಬಳಿಕ ಮಧ್ಯಾಹ್ನ ಪ್ರಕಟಣೆ ಹೊರಡಿಸಿದ ಬಿಎಂಆರ್ಸಿಎಲ್, ಬೆಳಗ್ಗೆ 10.30ರಿಂದ ಹಸಿರು ಮಾರ್ಗದಲ್ಲಿ ಸಂಪೂರ್ಣ ರೈಲು ಸಂಚಾರ ನಿಗದಿತ ವೇಳಾಪಟ್ಟಿಯಂತೆ ಪುನರಾರಂಭಗೊಂಡಿದ್ದು, ಎಲ್ಲ ಸೇವೆಗಳು ಸುಗಮವಾಗಿ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದೆ. ಪ್ರಯಾಣಿಕರಿಗೆ ಉಂಟಾದ ಅಸೌಕರ್ಯಕ್ಕೆ ನಿಗಮ ವಿಷಾದ ವ್ಯಕ್ತಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / SNEHA K