
ಕೋಲಾರ, ೦೯ ಜುಲೈ (ಹಿ.ಸ):
ಆಂಕರ್ : ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪ್ರಿಯವಾದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಎನ್.ಜಿ.ಒ ಸಂಸ್ಥೆಗಳ ಭಾಗವಹಿಸುವಿಕೆ ಅತ್ಯಂತ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ರೀಚಾ ಎನ್.ಜಿ.ಒ ಸಂಸ್ಥೆಯ ನೋಕಿಯಾ ಕಂಪನಿಯ ವತಿಯಿಂದ ಪಾಲುದಾರ ದೃಷ್ಟಿಕೋನ ಮತ್ತು ಸಾಮರ್ಥ್ಯ ನಿರ್ಮಾಣದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಗಳ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಮತ್ತು ಅಧಿಕಾರಿಗಳಿಂದ ಅಷ್ಟೇ ಸಾಧ್ಯವಾಗದ ಸಂದರ್ಭದಲ್ಲಿ ಇಂತಹ ಖಾಸಗಿ ಕಂಪನಿಗಳು, ಎನ್.ಜಿ.ಒ ಹಾಗೂ ಸಮಾಜದ ಸಹಕಾರ ಹಾಗೂ ಬೆಂಬಲ ಮುಖ್ಯವಾಗಿದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ತಲುಪಿಸಬಹುದು ನಮ್ಮೊಂದಿಗೆ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು
ಕೋಲಾರ ಜಿಲ್ಲೆಯಲ್ಲಿ ರೀಚಾ ಎನ್.ಜಿ.ಒ ಸಂಸ್ಥೆಯ ವತಿಯಿಂದ ಸುಮಾರು ೧೪ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ಸ್ಮಾರ್ಟ್ಪುರ್ ಕಾರ್ಯಕ್ರಮದ ಅಡಿಯಲ್ಲಿ ತನ್ನ ಸಂಸ್ಥೆಯ ವತಿಯಿಂದ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮತ್ತು ಮಾಹಿತಿ ನೀಡುವ ಮೂಲಕ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ಕೊಂಡಿಯಾಗಿ ಕೆಲಸ ಮಾಡಲಿ ಮುಂದೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ತಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವಂತಾಗಲಿ ಆಶಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ ರಮೇಶ್ ಮಾತನಾಡಿ ರಿಚಾ ಸಂಸ್ಥೆ ಪ್ರಮುಖವಾಗಿ ಜೀವನೋಪಾಯ, ಈ ಆಡಳಿತ, ಆರ್ಥಿಕ ಸೇರ್ಪಡೆ ಶಿಕ್ಷಣ ಮತ್ತು ಆರೋಗ್ಯ, ಪರಿಸರ ಸ್ನೇಹಿಯ ಜೊತೆಗೆ ಬಡವರಿಗೆ ಸೌಲಭ್ಯಗಳ ಕೆಲಸಗಳಿಗೆ ಒತ್ತು ನೀಡಿದ್ದು ಜಿಲ್ಲೆಯಲ್ಲಿ ಹಿಂದುಳಿದ ೪೦ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡಿದ್ದು ಈಗಾಗಲೇ ೧೪ ಗ್ರಾಮ ಪಂಚಾಯತಿಗಳಲ್ಲಿ ತಮ್ಮ ಚಟುವಟಿಕೆಗಳು ಒಳಗೊಂಡಿದೆ ಉಳಿದ ೨೬ ಪಂಚಾಯತಿಗಳನ್ನು ಆದಷ್ಟು ಬೇಗ ಚಟುವಟಿಕೆಗಳನ್ನು ಪ್ರಾರಂಭಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ಒದಗಿಸುವ ಮತ್ತು ಮಾಹಿತಿಯ ಅರಿವು ನೀಡುವ ಕೆಲಸವಾಗಲಿ ಎಂದರು.
ಕಾರ್ಯಕ್ರಮದಲ್ಲಿ ರೀಚಾ ಸಂಸ್ಥೆಯ ಕಾರ್ಯಾಚರಣೆ ಹಾಗೂ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ವಿಭಾಗದ ಮುಖ್ಯಸ್ಥ ಶಜಾದ್ ನಗರ , ಸಂಸ್ಥೆಯ ರಾಜ್ಯ ಮುಖ್ಯಸ್ಥ ಸಿಲಾಂಬರಸನ್, ಯೋಜನಾ ಸಂಯೋಜಕ ಎಂ.ವಿ ಚೇತನ್, ಕೆವಿಕೆ ವಿಜ್ಞಾನ ಸಂಸ್ಥೆಯ ಡಾ.ಅನಿಲ್, ಕೆನರಾ ಬ್ಯಾಂಕ್ ತರಬೇತಿದಾರ ವಿಜಯಕುಮಾರ್ ಸಂಸ್ಥೆಯ ಗಜೇಂದ್ರ, ಜಗನ್, ಕಂಗಾAಡ್ಲಹಳ್ಳಿ ಪಿಡಿಒ ವೈಷ್ಣವಿ ಸಾಗರ್ ಮತ್ತು ದೊಡ್ಡವಲಗಮಾದಿ ಪಿಡಿಒ ಸರಸ್ವತಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್