
ಕೋಲಾರ : ಜುಲೈ ೩(ಹಿ.ಸ):
ಆಂಕರ್ : ಹಳಕಟ್ಟಿ ಮನೆಮನೆಗೂ, ಮಠಗಳಿಗೂ ತೆರಳಿ ತಾಳೆಗರಿಗಳನ್ನು ಹಾಗೂ ವಚನಗಳ ಕೈಬರಹದ ಪ್ರತಿಗಳನ್ನು ಸಂಗ್ರಹಿಸಿದರು. ಅಂದಿನ ಕಾಲದಲ್ಲಿ ಮಂಗಳೂರಿನ ಕ್ರೈಸ್ತ ಮುದ್ರಣಾಲಯಕ್ಕೆ ವಚನಗಳನ್ನು ಮುದ್ರಿಸಲು ವಿನಂತಿಸಿದಾಗ ಅವರು ನಿರಾಕರಿಸಿದ್ದರು. ಅಂತಹ ಸಂದರ್ಭದಲ್ಲೂ ಧೃತಿಗೆಡದ ಹಳಕಟ್ಟಿ, ತಮ್ಮ ಸ್ವಂತ ಸಂಪಾದನೆಯ ಜೊತೆಗೆ ಮನೆಯನ್ನು ಮಾರಿ ಸ್ವಂತ ಮುದ್ರಣಾಲಯವನ್ನು ಸ್ಥಾಪಿಸಿ 'ವಚನಾಮೃತ' ಎಂಬ ಮಹಾನ್ ಗ್ರಂಥವನ್ನು ಈ ತಲೆಮಾರಿಗೆ ತಲುಪಿಸಿದರು. ಯುವಜನತೆ ಇವರ ಸಾಹಿತ್ಯವನ್ನು ಓದಿ ಅಳವಡಿಸಿಕೊಂಡಾಗ ಮಾತ್ರ ಇವರ ಶ್ರಮ ಸಾರ್ಥಕವಾಗುತ್ತದೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ, ಎಂದು ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಸುರೇಶ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ' ಹಾಗೂ ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೀಪ ತಾನು ಉರಿದು ಜಗತ್ತಿಗೆ ಬೆಳಕು ನೀಡುವಂತೆ, ಫಕೀರಪ್ಪ ಗುರುಪ್ಪ (ಫ.ಗು.) ಹಳಕಟ್ಟಿ ಅವರು ತಮ್ಮ ಸಂಪಾದನೆ ಮತ್ತು ಆಸ್ತಿಯನ್ನು ಮಾರಿ, ವಚನಗಳ ಸಂಗ್ರಹ ಮಾಡಿ ಪುಸ್ತಕ ರೂಪದಲ್ಲಿ ನಮಗೆ ನೀಡಿದ್ದಾರೆ, ಅವರು ಮನೆಮನೆಗೂ, ಮಠಗಳಿಗೂ ತೆರಳಿ ತಾಳೆಗರಿಗಳನ್ನು ಹಾಗೂ ವಚನಗಳ ಕೈಬರಹದ ಪ್ರತಿಗಳನ್ನು ಸಂಗ್ರಹಿಸಿದರು. ಅಂದಿನ ಕಾಲದಲ್ಲಿ ಮಂಗಳೂರಿನ ಕ್ರೈಸ್ತ ಮುದ್ರಣಾಲಯಕ್ಕೆ ವಚನಗಳನ್ನು ಮುದ್ರಿಸಲು ವಿನಂತಿಸಿದಾಗ ಅವರು ನಿರಾಕರಿಸಿದ್ದರು. ಅಂತಹ ಸಂದರ್ಭದಲ್ಲೂ ಧೃತಿಗೆಡದ ಹಳಕಟ್ಟಿ, ತಮ್ಮ ಸ್ವಂತ ಸಂಪಾದನೆಯ ಜೊತೆಗೆ ಮನೆಯನ್ನು ಮಾರಿ ಸ್ವಂತ ಮುದ್ರಣಾಲಯವನ್ನು ಸ್ಥಾಪಿಸಿ 'ವಚನಾಮೃತ' ಎಂಬ ಮಹಾನ್ ಗ್ರಂಥವನ್ನು ಈ ತಲೆಮಾರಿಗೆ ತಲುಪಿಸಿದರು. ಯುವಜನತೆ ಇವರ ಸಾಹಿತ್ಯವನ್ನು ಓದಿ ಅಳವಡಿಸಿಕೊಂಡಾಗ ಮಾತ್ರ ಇವರ ಶ್ರಮ ಸಾರ್ಥಕವಾಗುತ್ತದೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ, ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪರಶುರಾಮ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗದೆ, ವಚನ ಸಾಹಿತ್ಯದಂತಹ ಅಮೂಲ್ಯ ಕೃತಿಗಳನ್ನು ಅಧ್ಯಯನ ಮಾಡಬೇಕು, ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಂದಾಯ ಅಧಿಕಾರಿ ರಮೇಶ್, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದ ದೂರವಿದ್ದು, ಜ್ಞಾನಾರ್ಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಸ್ವಾಗತಿಸಿ, ಇಲಾಖೆಯ ವತಿಯಿಂದ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಇಲಾಖಾ ಸಿಬ್ಬಂದಿ ಆನಂದ್ ಉಪಸ್ಥಿತರಿದ್ದರು. ಮಂಜುಳಾ ಕೊಂಡರಾಜನಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ 'ವಚನಾನುಭವ' ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೀರ್ತನ.ಎನ್ ಪ್ರಥಮ ಬಹುಮಾನ ಮೋನಿಕ.ಎಂ ದ್ವಿತೀಯ ಬಹುಮಾನ ಮತ್ತು ದೀಪ್ತಿ ಜೆ.ಎನ್ ತೃತೀಯ ಬಹುಮಾನ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿ ಗೌರವಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್