ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ: ಆರ್ಎಸ್ಎಸ್
ನವದೆಹಲಿ, 03 ಜುಲೈ (ಹಿ.ಸ.): ಆ್ಯಂಕರ್:ಅಯೋಧ್ಯೆಯ ರಾಮಜನ್ಮಭೂಮಿ ರಾಮಮಂದಿರದ ಹುಂಡಿಗಳಲ್ಲಿನ ಕಾಣಿಕೆ ಹಣ ಕಳ್ಳತನವಾಗಿರುವ ಘಟನೆ ಅತ್ಯಂತ ದುರ್ಭಾಗ್ಯಕರವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಒತ್ತಾಯಿಸಿದೆ. ಈ ಕುರಿತು ಸಂಘದ ಸರ್ಕಾರ್ಯವಾಹ ದತ್ತಾತ್ರೇ
ದತ್ತಾತ್ರೇಯ ಹೊಸಬಾಳೆ


ನವದೆಹಲಿ, 03 ಜುಲೈ (ಹಿ.ಸ.):

ಆ್ಯಂಕರ್:ಅಯೋಧ್ಯೆಯ ರಾಮಜನ್ಮಭೂಮಿ ರಾಮಮಂದಿರದ ಹುಂಡಿಗಳಲ್ಲಿನ ಕಾಣಿಕೆ ಹಣ ಕಳ್ಳತನವಾಗಿರುವ ಘಟನೆ ಅತ್ಯಂತ ದುರ್ಭಾಗ್ಯಕರವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಒತ್ತಾಯಿಸಿದೆ.

ಈ ಕುರಿತು ಸಂಘದ ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿ, ಈ ಘಟನೆ ಸಮಸ್ತ ಹಿಂದೂ ಸಮಾಜ ಹಾಗೂ ಕೋಟ್ಯಂತರ ರಾಮಭಕ್ತರ ಭಾವನೆ ಮತ್ತು ನಂಬಿಕೆಗೆ ಧಕ್ಕೆಯುಂಟು ಮಾಡಿದೆ ಎಂದು ಹೇಳಿದ್ದಾರೆ.

ರಾಮಮಂದಿರದ ಆಡಳಿತವನ್ನು ನಿರ್ವಹಿಸುತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಆಡಳಿತ ಹಾಗೂ ನಿರ್ವಹಣೆಯಲ್ಲಿರುವ ಎಲ್ಲ ಕೊರತೆಗಳನ್ನು ತಕ್ಷಣ ಸರಿಪಡಿಸಬೇಕು. ರಾಮಮಂದಿರದ ಮೇಲಿನ ಭಕ್ತರ ಅಚಲ ನಂಬಿಕೆ ಮತ್ತು ಶ್ರದ್ಧೆ ಯಾವುದೇ ಕಾರಣಕ್ಕೂ ಕುಂದಬಾರದು. ಪ್ರಸ್ತುತ ಉಂಟಾಗಿರುವ ಗೊಂದಲ ಮತ್ತು ಅನುಮಾನಗಳಿಗೆ ಅಂತ್ಯ ಬರಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಹಣಕಾಸಿನ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ, ಶುದ್ಧತೆ ಹಾಗೂ ಧಾರ್ಮಿಕ ಪಾವಿತ್ರ್ಯವನ್ನು ಕಾಪಾಡುವ ವ್ಯವಸ್ಥೆ ರೂಪಿಸುವ ಮೂಲಕ ಟ್ರಸ್ಟ್ ಹಿಂದೂ ಸಮಾಜದ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಈಗಾಗಲೇ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದ್ದು, ಅದರ ಶಿಫಾರಸಿನ ಮೇರೆಗೆ ಕಾನೂನು ಕ್ರಮ ಆರಂಭಿಸಲಾಗಿದೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಸಾಬೀತಾದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸುವುದು ಅಗತ್ಯ ಎಂದು ಹೊಸಬಾಳೆ ಹೇಳಿದ್ದಾರೆ.

ಇದೇ ವೇಳೆ, ಈ ಸೂಕ್ಷ್ಮ ಸಂದರ್ಭದಲ್ಲಿ ಹಿಂದೂ ಸಮಾಜವು ಧೈರ್ಯ ಮತ್ತು ಸಂಯಮದಿಂದ ವರ್ತಿಸಬೇಕು. ಈ ದುರ್ಭಾಗ್ಯಕರ ಘಟನೆಯನ್ನು ದುರುಪಯೋಗಪಡಿಸಿಕೊಂಡು ಹಿಂದೂ ಧರ್ಮ ಹಾಗೂ ಸಮಾಜವನ್ನು ಅಪಖ್ಯಾತಿಗೊಳಿಸಲು ಹಿಂದೂ ವಿರೋಧಿ ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ನಡೆಸುವ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರವು ಪೀಳಿಗೆಗಳ ಹೋರಾಟ, ಕೋಟ್ಯಂತರ ರಾಮಭಕ್ತರ ಸಮರ್ಪಣೆ, ತ್ಯಾಗ ಮತ್ತು ಬಲಿದಾನದ ಫಲವಾಗಿದ್ದು, ಸಮಸ್ತ ಹಿಂದೂ ಸಮಾಜದ ಶ್ರದ್ಧೆ, ಭಕ್ತಿ ಮತ್ತು ಆಸ್ಥೆಯ ಪ್ರಮುಖ ಕೇಂದ್ರವಾಗಿದೆ ಎಂದು ಹೊಸಬಾಳೆ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande