
ಕೋಲಾರ, ೦೩ ಜುಲೈ (ಹಿ.ಸ)
ಆಂಕರ್ : ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ನೊಂದವರು ಮತ್ತು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ದುಃಖ ದುಮ್ಮಾನಕ್ಕೆ ಧನಿಯಾಗಬೇಕು. ಸಮಾಜದಲ್ಲಿ ನಿರ್ಲಕ್ಷö್ಯಕ್ಕೆ ಒಳಗಾದವರ ಬಗ್ಗೆ ವರದಿ ಮಾಡಿ ಸರ್ಕಾರದ ಕಣ್ಣು ತೆರೆಸಬೇಕು ಎಂದು ಬಂಗಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಕರೆ ನೀಡಿದರು.
ಬಂಗಾರಪೇಟೆ ನಗರದ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಕೋಲಾರ ಜಿಲ್ಲಾ ಹಾಗೂ ಬಂಗಾರಪೇಟೆ ತಾಲೂಕು ಘಟಕದಿಂದ ಏರ್ಪಡಿಸಿದ್ದ ಎಂಟನೇ ವರ್ಷದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪತ್ರಿಕಾ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಕ್ಷೇತ್ರವು ಸಮಾಜದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸತ್ಯ, ನಿಷ್ಪಕ್ಷಪಾತ ಮತ್ತು ಜವಾಬ್ದಾರಿಯುತ ಸುದ್ದಿಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪತ್ರಕರ್ತರು ನಿರಂತರವಾಗಿ ಮಾಡುತ್ತಿದ್ದಾರೆ. ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತಂದು ಆಡಳಿತದ ಗಮನ ಸೆಳೆಯುವಲ್ಲಿ ಮಾಧ್ಯಮಗಳ ಸೇವೆ ಅನನ್ಯವಾಗಿದೆ, ಪ್ರಾಮಾಣಿಕ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಗತ್ಯವಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರು ವೃತ್ತಿ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ರಾಜ್ಯ ಕೇರಾ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಮಾತನಾಡಿ, ಪತ್ರಕರ್ತರ ಹಿತಾಸಕ್ತಿ, ವೃತ್ತಿಪರ ಬೆಳವಣಿಗೆ ಹಾಗೂ ಸಮಾಜಮುಖಿ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಂಘವು ಕಳೆದ ಎಂಟು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮಗಳು ಪತ್ರಕರ್ತರ ಸೇವೆಗೆ ದೊರೆಯುವ ಗೌರವದ ಸಂಕೇತವಾಗಿವೆ, ಪತ್ರಕರ್ತರ ವೃತ್ತಿ ನೈತಿಕತೆ, ಸಮಾಜಮುಖಿ ಪತ್ರಿಕೋದ್ಯಮ, ಅಭಿವ್ಯಕ್ತಿ ಸ್ವಾತಂತ್ರö್ಯ ಹಾಗೂ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಜವಾಬ್ದಾರಿಯ ಕುರಿತು ಸಮಾಜದಲ್ಲಿ ಸತ್ಯ ಮತ್ತು ನ್ಯಾಯದ ಪರವಾಗಿ ಪತ್ರಕರ್ತರು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಪತ್ರಿಕಾ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ವಿವಿಧ ಗಣ್ಯರ ಹೆಸರಿನಲ್ಲಿ ಜಿಲ್ಲಾ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆಯಾದ ಕೋಲಾರ ಚೇತನ್ ಬಾಬು (ಡಾ.ಬಿ.ಆರ್.ಅಂಬೇಡ್ಕರ್ ನೆನಪಿನ ಪ್ರಶಸ್ತಿ) ಮುಳಬಾಗಿಲು ಮುರಳಿ (ಡಿ.ವಿ.ಗುಂಡಪ್ಪರವರ ಸ್ಮರಣಾರ್ಥ ಪ್ರಶಸ್ತಿ) ಬಂಗಾರಪೇಟೆ ಲೋಕೇಶ್ (ಪಿ.ಲಂಕೇಶ್ ಸ್ಮರಣಾರ್ಥ ಪ್ರಶಸ್ತಿ) ಕೆ. ಸತ್ಯನಾರಾಯಣ( ಸಿದ್ದಪ್ಪ ನೇಗಿನಾಳ ರವರ ನೆನಪಿನ ಪ್ರಶಸ್ತಿ) ಹೆಚ್.ಎಂ.ಸುರೇಶ್ಕುಮಾರ್ ರವರಿಗೆ ನೀಡಿ ಸನ್ಮಾನಿಸಲಾಯಿತು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಂಗಾರಪೇಟೆಯ ಕುಶಾಲ್ ರುಕ್ವಿತ್.ಕೆ, ಶ್ರೇಯಸ್ ನಿಶಾಂತ್ ಎ.ಆರ್.ಗೌಡ, ಸೈಯದ್ ಇಫ್ತಿಕಾರ್ ಅಹಮದ್ ಹಾಗೂ ತಿಪಟೂರು ತೃತಿ.ಬಿ.ಆರ್, ಅವರಿಗೆ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ ಗಣ್ಯರು, ಶಿಕ್ಷಣದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಈ.ಎಸ್.ವಿಶ್ವನಾಥ್, ರಾಜ್ಯ ಉಪಾಧ್ಯಕ್ಷೆ ಪದ್ಮನಾಗರಾಜ್, ರಾಜ್ಯ ಕಾರ್ಯದರ್ಶಿ ಸುಮಾ ಪುರುಷೋತ್ತಮ್, ರಾಜ್ಯ ಸಹ ಕಾರ್ಯದರ್ಶಿ ಎಂ.ಆರ್.ಚೇತನ್ಬಾಬು, ಬೆಂಗಳೂರು ಉತ್ತರ ಘಟಕದ ಅಧ್ಯಕ್ಷ ಉಮೇಶ್, ಕೋಲಾರ ಜಿಲ್ಲಾಧ್ಯಕ್ಷ ಮಾ.ಶ.ರಾಜ್ಗೋಪಾಲ್, ಗುಟ್ಟಹಳ್ಳಿ ಶ್ರೀನಿವಾಸ್, ತಾಲೂಕು ಗೌರವಾಧ್ಯಕ್ಷ ಕಾಂತರಾಜ್, ತಾಲೂಕು ಅಧ್ಯಕ್ಷ ಟೈಗರ್ ಎಂ.ಮAಜುನಾಥ್, ತಾಲ್ಲೂಕು ಅಧ್ಯಕ್ಷರುಗಳಾದ ಕೆ.ಜಿ.ಎಪ್ ಕೃಷ್ಣಮೂರ್ತಿ, ಶ್ರೀನಿವಾಸಪುರ ವೆಂಕಟೇಶ್, ಮುಳಬಾಗಿಲು ವಿ.ಚಲಪತಿ, ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್