ರಾಜ್ಯದಲ್ಲಿ ಬರ; ತಮಿಳುನಾಡಿಗೆ ನೀರು ಹರಿಸುತ್ತಿರುವ ಸರಕಾರ: ಆರ್. ಅಶೋಕ ಆರೋಪ
ಬೆಂಗಳೂರು, 03 ಜುಲೈ (ಹಿ.ಸ.): ಆ್ಯಂಕರ್:ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಕಾಣಿಸಿಕೊಳ್ಳುತ್ತಿದ್ದರೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೆ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ ಆರೋಪಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ
ಅಶೋಕ


ಬೆಂಗಳೂರು, 03 ಜುಲೈ (ಹಿ.ಸ.):

ಆ್ಯಂಕರ್:ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಕಾಣಿಸಿಕೊಳ್ಳುತ್ತಿದ್ದರೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೆ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ ಆರೋಪಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು ಒಂದು ತಿಂಗಳಾದರೂ ಆಡಳಿತದಲ್ಲಿ ಯಾವುದೇ ಹೊಸತನ ಕಾಣುತ್ತಿಲ್ಲ. ಹಳೆ ಬಾಟಲಿಗೆ ಹೊಸ ಹೆಂಡ ಎಂಬಂತಾಗಿದೆ ಎಂದು ಟೀಕಿಸಿದರು.

ರೈತರಿಗೆ ನೀರಿನ ಕೊರತೆಯಿಂದ ಬೆಳೆ ಬೆಳೆಯಬೇಡಿ ಎಂದು ಮುಖ್ಯಮಂತ್ರಿ ನೀಡಿರುವ ಸಲಹೆಯನ್ನು ಪ್ರಶ್ನಿಸಿದ ಅಶೋಕ, ರೈತರಿಗೆ ಯಾವಾಗ ಬೆಳೆ ಬೆಳೆಯಬೇಕು ಎಂಬ ಅರಿವು ಮೊದಲಿನಿಂದಲೂ ಇದೆ. ತಮಿಳುನಾಡಿಗೂ ಇದೇ ರೀತಿಯ ಸಲಹೆ ನೀಡುವ ಧೈರ್ಯ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದರೂ ರಾಜ್ಯ ಸರ್ಕಾರ ಸಮರ್ಪಕವಾಗಿ ಪ್ರತಿಕ್ರಿಯಿಸಿಲ್ಲ. ಬದಲಿಗೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಮೇಕೆದಾಟು ಯೋಜನೆಗೆ ಸರ್ಕಾರ ಒಂದು ರೂಪಾಯಿಯನ್ನೂ ಮೀಸಲಿಟ್ಟಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬರಗಾಲದ ಲಕ್ಷಣಗಳು ಗೋಚರಿಸುತ್ತಿದ್ದರೂ ಜಲಸಂಪನ್ಮೂಲ ಸಚಿವರು ಕ್ಷೇತ್ರಗಳಿಗೆ ಭೇಟಿ ನೀಡಿಲ್ಲ. ತುಂಗಭದ್ರಾ ಕ್ರಸ್ಟ್‌ ಗೇಟ್‌ ಚಾಲನಾ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಕೃಷಿ ಇಲಾಖೆಗೆ ಪೂರ್ಣ ಪ್ರಮಾಣದ ಸಚಿವರಿಲ್ಲದಿರುವುದು ರೈತರ ಸಮಸ್ಯೆಗಳನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಅವರು ಹೇಳಿದರು.

ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯದ 22 ಜಲಾಶಯಗಳಲ್ಲಿ 335.292 ಟಿಎಂಸಿ ನೀರಿದ್ದರೆ, ಪ್ರಸ್ತುತ ಕೇವಲ 66.099 ಟಿಎಂಸಿ ನೀರು ಮಾತ್ರ ಉಳಿದಿದೆ. ಆಲಮಟ್ಟಿ, ತುಂಗಭದ್ರಾ, ಹಿಡಕಲ್ ಹಾಗೂ ಭೀಮಾ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ ಎಂದು ಅಶೋಕ ಮಾಹಿತಿ ನೀಡಿದರು.

ಬರಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಕೂಡಲೇ ರೈತರೊಂದಿಗೆ ಸಭೆ ನಡೆಸಿ, ಬೆಳೆಹಾನಿ ಪರಿಹಾರಕ್ಕಾಗಿ ₹10,000 ಕೋಟಿ ಮೀಸಲಿಡಬೇಕು. ಜೊತೆಗೆ ವಿಶೇಷ ಕಾರ್ಯಪಡೆ (ಟಾಸ್ಕ್‌ ಫೋರ್ಸ್‌) ರಚಿಸಿ, ಜಾನುವಾರುಗಳ ರಕ್ಷಣೆಗೆ ಗೋಶಾಲೆಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡುತ್ತಿರುವುದನ್ನು ಟೀಕಿಸಿದ ಅಶೋಕ, ಹಣಕಾಸಿನ ಕೊರತೆ ಇಲ್ಲದಿದ್ದರೂ ಆಡಳಿತ ವೈಫಲ್ಯವೇ ನಗರ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದನ್ನು ಅವರ ಹೇಳಿಕೆಯೇ ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.

ಬಿಡಿಎ ಹಾಗೂ ಬಿಎಂಆರ್‌ಡಿಎಯಂತಹ ಪ್ರಮುಖ ಸಂಸ್ಥೆಗಳನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಸಚಿವರ ನಡುವೆ ಒಳಜಗಳ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರ ಇನ್ನಾದರೂ ಎಚ್ಚೆತ್ತು ಜನರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande