
ಗದಗ, 03 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದ ಸಮೀಪ ಶುಕ್ರವಾರ ಸಂಜೆ ಸಂಭವಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಬಸ್ ಅಪಘಾತದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ನ ಬ್ರೇಕ್ ಏಕಾಏಕಿ ಕೈಕೊಟ್ಟ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.
ಲಕ್ಷ್ಮೇಶ್ವರ ಪಟ್ಟಣದಿಂದ ಬಾಳೆಹೊಸೂರ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಸುಮಾರು 90ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸಂಜೆ ಸಮಯವಾಗಿದ್ದರಿಂದ ಶಾಲೆ ಹಾಗೂ ಕಾಲೇಜು ಮುಗಿಸಿಕೊಂಡು ಮನೆಗಳಿಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಬಸ್ನಲ್ಲಿ ಹೆಚ್ಚಾಗಿತ್ತು. ಆಸನಗಳು ಭರ್ತಿಯಾಗಿದ್ದಷ್ಟೇ ಅಲ್ಲದೆ ಹಲವರು ನಿಂತುಕೊಂಡೇ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಶಿಗ್ಲಿ ಹಾಗೂ ದೊಡ್ಡೂರ ಗ್ರಾಮದ ಮಧ್ಯೆ ಕಿರು ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕ ರಸ್ತೆಯ ಮೂಲಕ ನಡೆಸಲಾಗುತ್ತಿತ್ತು. ಇದೇ ರಸ್ತೆಯಲ್ಲಿ ಬಸ್ ಸಾಗುತ್ತಿದ್ದ ವೇಳೆ ಚಾಲಕ ಬ್ರೇಕ್ ಹಾಕಲು ಮುಂದಾದಾಗ ಬ್ರೇಕ್ ವ್ಯವಸ್ಥೆ ಕೈಕೊಟ್ಟಿದೆ ಎನ್ನಲಾಗಿದೆ. ಬಸ್ ನಿಯಂತ್ರಣ ತಪ್ಪುತ್ತಿದ್ದಂತೆಯೇ ಎದುರಾಗಬಹುದಾದ ದೊಡ್ಡ ದುರಂತವನ್ನು ತಪ್ಪಿಸಲು ಚಾಲಕ ಹರಸಾಹಸ ಪಟ್ಟಿದ್ದು, ಕೊನೆಗೆ ರಸ್ತೆ ಬದಿಯ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿದ ಪರಿಣಾಮ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತದ ಸದ್ದು ಕೇಳಿ ಸಮೀಪದ ಗ್ರಾಮಗಳ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಸ್ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದು ಪ್ರಾಥಮಿಕ ನೆರವು ನೀಡಲಾಯಿತು.
ಅಪಘಾತದಲ್ಲಿ ವಿವಿಧ ಗ್ರಾಮಗಳ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಹಲವರಿಗೆ ತಲೆ, ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಇದಲ್ಲದೆ 7ಕ್ಕೂ ಹೆಚ್ಚು ಇತರ ಪ್ರಯಾಣಿಕರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಂಬ್ಯುಲೆನ್ಸ್ ಹಾಗೂ ಇತರೆ ವಾಹನಗಳ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಗಾಯಾಳುಗಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಚಾರವನ್ನು ಕೆಲಕಾಲ ನಿಯಂತ್ರಿಸಿ ಪರಿಸ್ಥಿತಿಯನ್ನು ಸಹಜಗೊಳಿಸಿದರು. ಅಪಘಾತಕ್ಕೆ ಬ್ರೇಕ್ ವೈಫಲ್ಯವೇ ಪ್ರಮುಖ ಕಾರಣವೇ ಅಥವಾ ತಾಂತ್ರಿಕ ದೋಷವೋ ಎಂಬ ಕುರಿತು ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಘಟನೆ ಬಳಿಕ ಸ್ಥಳೀಯರು ತಾತ್ಕಾಲಿಕ ರಸ್ತೆಯ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಮರ್ಪಕ ಎಚ್ಚರಿಕೆ ಫಲಕಗಳು, ವೇಗ ನಿಯಂತ್ರಣ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. ಸಾರ್ವಜನಿಕ ಸಾರಿಗೆ ವಾಹನಗಳ ತಾಂತ್ರಿಕ ತಪಾಸಣೆಯನ್ನು ನಿಯಮಿತವಾಗಿ ನಡೆಸಿದರೆ ಇಂತಹ ಅಪಘಾತಗಳನ್ನು ತಡೆಗಟ್ಟಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಅದೃಷ್ಟವಶಾತ್ ಬಸ್ ಕಂದಕಕ್ಕೆ ಉರುಳದೇ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ನಿಂತಿದ್ದರಿಂದ ದೊಡ್ಡ ಮಟ್ಟದ ಪ್ರಾಣಹಾನಿ ತಪ್ಪಿದೆ. ಇಲ್ಲದಿದ್ದರೆ 90ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಈ ಬಸ್ನಲ್ಲಿ ಭೀಕರ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಕರಣ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP