
ಕೋಲಾರ, ೨೮ ಜುಲೈ (ಹಿ.ಸ):
ಆ್ಯಂಕರ್: ಪತ್ರಕರ್ತರ ಸ್ಪೋರ್ಟ್ಸ್ ಕ್ಲಬ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ 'ಸಹಕಾರ ಕಪ್' ಕ್ರಿಕೆಟ್ ಟೂರ್ನಿಯಲ್ಲಿ ಆರ್ಆರ್ ತಂಡ ಪ್ರಶಸ್ತಿ ಮುಡಿಗೇರಿತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್ ತಂಡ 6 ಓವರ್‌ಗಳಲ್ಲಿ 62 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್ಡಿಪಿಆರ್ ತಂಡ 42 ರನ್‌ಗಳಿಗೆ ಸೀಮಿತವಾಗಿ 20 ರನ್‌ಗಳ ಅಂತರದಿಂದ ಸೋಲನುಭವಿಸಿತು.
ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಆರ್ಆರ್ ತಂಡದ ವಿಶ್ವನಾಥ್, ಶ್ರೇಷ್ಠ ಬೌಲರ್ ಪ್ರಶಸ್ತಿಯನ್ನು ರವೀಂದ್ರ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಭಜರಂಗದಳ ತಂಡದ ಶಿವು ಪಡೆದುಕೊಂಡರು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್, ಕ್ರೀಡೆಗಳು ಆರೋಗ್ಯ ಮತ್ತು ಕ್ರಿಯಾಶೀಲತೆಗೆ ಪೂರಕವಾಗಿದ್ದು, ಪತ್ರಕರ್ತರ ಒತ್ತಡ ನಿವಾರಣೆಗೆ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್‌ಕುಮಾರ್ ಮಾತನಾಡಿ, ಪತ್ರಕರ್ತರು ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸಿದ್ದು, ನೂರಾರು ಕ್ರೀಡಾಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು. ವಿಜೇತರಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್