
ಬೆಂಗಳೂರು, 27 ಜುಲೈ (ಹಿ.ಸ.):
ಆ್ಯಂಕರ್:ಬೀದರ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಚಿವ ಈಶ್ವರ ಖಂಡ್ರೆ ಸೋಮವಾರ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ, ಗ್ರಾಮೀಣ ಜನರ ಸಮಸ್ಯೆಗಳು, ಉದ್ಯೋಗ ಸೃಷ್ಟಿ ಹಾಗೂ ಬರ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು.
ಮಳೆಯ ಕೊರತೆಯಿಂದ ಜಿಲ್ಲೆಯ ಗ್ರಾಮೀಣ ಜನರು ಉದ್ಯೋಗ ಅರಸಿ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿರುವ ವರದಿಗಳು ಬರುತ್ತಿದ್ದು, ಈ ವಲಸೆಯನ್ನು ತಡೆಯಲು ವಿಬಿಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ಬಯಸುವ ಪ್ರತಿಯೊಬ್ಬರಿಗೂ ಕೆಲಸ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಹಲವು ಕೊಳವೆಬಾವಿಗಳು ಬತ್ತಿರುವ ಹಿನ್ನೆಲೆಯಲ್ಲಿ ಜಲ ಮರುಪೂರಣ ಮತ್ತು ಜಲ ಸಂರಕ್ಷಣೆಗೆ ಆದ್ಯತೆ ನೀಡಿ, ಯೋಜನೆಯಡಿ ಹೆಚ್ಚಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದರು.
ಜುಲೈ 1ರಿಂದ ರಾಜ್ಯದಲ್ಲಿ 60:40ರ ಅನುಪಾತದಲ್ಲಿ ಜಾರಿಗೊಂಡಿರುವ ವಿಬಿಜಿ ರಾಮ್ ಜಿ ಯೋಜನೆಗೆ ಮೊದಲ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರ ₹1,700 ಕೋಟಿ ಹಾಗೂ ರಾಜ್ಯ ಸರ್ಕಾರ ₹1,200 ಕೋಟಿ ಅನುದಾನ ನೀಡಿದ್ದು, ಪ್ರತಿ ತಿಂಗಳು 5 ಲಕ್ಷ ಗ್ರಾಮೀಣರಿಗೆ ಉದ್ಯೋಗ ಕಲ್ಪಿಸಿ 1.5 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲು ಅಗತ್ಯ ಅನುದಾನ ಲಭ್ಯವಿದೆ ಎಂದು ಸಚಿವರು ತಿಳಿಸಿದರು.
ಮನರೇಗಾದಲ್ಲಿ ನೋಂದಾಯಿತ ಗ್ರಾಮೀಣ ಕುಟುಂಬಗಳಿಗೆ ವಿಬಿಜಿ ರಾಮ್ ಜಿ ಉದ್ಯೋಗ ಚೀಟಿ ವಿತರಿಸಿ, ಉದ್ಯೋಗ ಬಯಸುವ ಪ್ರತಿಯೊಬ್ಬರಿಗೂ ಸ್ಥಳೀಯವಾಗಿ ಕೆಲಸ ನೀಡಬೇಕು. ಗ್ರಾಮೀಣ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ತಡೆಯುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.