
ಬೆಂಗಳೂರು, 26 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯ ಸರ್ಕಾರವು ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಸುಮಾರು ₹5,000 ಕೋಟಿ ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್ವರ್ಕ್ (ಬಿಪಿಎನ್) ಕೊಲೋಕ್ವಿಯಂ–2026 ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ವಿಜ್ಞಾನ ಪ್ರಯೋಗಾಲಯಗಳು ಹಾಗೂ ಫಿಸಿಯೋಥೆರಪಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಇದರಿಂದ ಬೆಂಗಳೂರು ಜಾಗತಿಕ ಮಟ್ಟದ ಕ್ರೀಡಾ ವೈದ್ಯಕೀಯ ಕೇಂದ್ರವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ಶಿಕ್ಷಣ ವಿಸ್ತರಿಸುತ್ತಿದ್ದರೂ, ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವುದು ಇನ್ನೂ ಸವಾಲಾಗಿದೆ. ಅನೇಕ ಆರೋಗ್ಯ ಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳ ಕೊರತೆಯಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.
ಆರೋಗ್ಯವಂತ ಸಮಾಜವೇ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಭದ್ರ ಬುನಾದಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್ವರ್ಕ್ ಸತತ 16ನೇ ವರ್ಷವೂ ವೃತ್ತಿಪರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಪರಮೇಶ್ವರ್, ಫಿಸಿಯೋಥೆರಪಿ ಶಿಕ್ಷಣ, ಸಂಶೋಧನೆ ಹಾಗೂ ಸಾರ್ವಜನಿಕ ಆರೋಗ್ಯದ ಅಭಿವೃದ್ಧಿಗೆ ತಜ್ಞರು ನೀಡುವ ಸಲಹೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII