
ನವ ದೆಹಲಿ, 25 ಜುಲೈ (ಹಿ.ಸ.):
ಆ್ಯಂಕರ್:
ಸಾಮಾಜಿಕ ಜಾಲತಾಣ ಅಭಿಯಾನ 'ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)' ಜಂತರ್-ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳುವ ನಾಗರಿಕರನ್ನು ತಡೆಯುತ್ತಿರುವುದಾಗಿ ಆರೋಪಿಸಿ, ಈ ಸಂಬಂಧ ದೆಹಲಿ ಪೊಲೀಸ್ ಆಯುಕ್ತರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದೆ.
ಶನಿವಾರ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಜಂತರ್-ಮಂತರ್ ಸುತ್ತಮುತ್ತ ಪೊಲೀಸರು ಭಯದ ವಾತಾವರಣ ಮತ್ತು ಸುತ್ತುವರಿಯುವ ಕ್ರಮ ಅನುಸರಿಸುತ್ತಿರುವುದನ್ನು ಸಿಜೆಪಿ ತೀವ್ರವಾಗಿ ಖಂಡಿಸಿದೆ. ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ನಾಗರಿಕರು ಜಂತರ್-ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪ್ರತಿಭಟನೆಗೆ ಸಹಕಾರ ನೀಡುವ ಬದಲು, ಪೊಲೀಸರು ನಾಗರಿಕರನ್ನು ಅನಧಿಕೃತವಾಗಿ ವಶಕ್ಕೆ ಪಡೆದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಪ್ರತಿಭಟನಾಕಾರರಿಗೆ ಆಹಾರ ತಲುಪಿಸುತ್ತಿರುವ ಸ್ವಯಂಸೇವಕರನ್ನು ತಡೆಯಲಾಗುತ್ತಿದೆ. ಕುಡಿಯುವ ನೀರು, ಔಷಧಿ, ಸ್ವಚ್ಛತಾ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನೂ ಅಡ್ಡಿಪಡಿಸಲಾಗುತ್ತಿದೆ. ಇದರಿಂದ ಜಂತರ್-ಮಂತರ್ ಅನ್ನು ಸುತ್ತುವರಿದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಜೆಪಿ ಹೇಳಿದೆ.
ಹೇಳಿಕೆಯಲ್ಲಿ ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ಸಿಜೆಪಿ, ಶಾಂತಿಯುತ ಪ್ರತಿಭಟನೆ ನಡೆಸುವುದು ಭಾರತದ ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದೆ ಎಂದು ತಿಳಿಸಿದೆ. ಜಂತರ್-ಮಂತರ್ ಯಾವುದೇ ಸೇನಾ ಪ್ರದೇಶ ಅಥವಾ ಕಾರಾಗೃಹವಲ್ಲ; ಅದು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಾಗಿ ನಿಗದಿಪಡಿಸಲಾದ ಸ್ಥಳವಾಗಿದೆ. ಶಾಂತಿಯುತ ಸಭೆಗಳನ್ನು ಸುಗಮಗೊಳಿಸುವುದು ಪೊಲೀಸರ ಕರ್ತವ್ಯವಾಗಿದ್ದು, ಭಯ, ಹಸಿವು ಹಾಗೂ ಪ್ರತ್ಯೇಕತೆಯ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವುದು ಅವರ ಕೆಲಸವಲ್ಲ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಆಯುಕ್ತರು ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿ, ನಾಗರಿಕರನ್ನು ಜಂತರ್-ಮಂತರ್‌ಗೆ ತೆರಳುವುದನ್ನು ತಡೆಯುವುದು ಹಾಗೂ ಬೆದರಿಸುವ ಕ್ರಮಗಳನ್ನು ನಿಲ್ಲಿಸಬೇಕು ಎಂದು ಸಿಜೆಪಿ ಆಗ್ರಹಿಸಿದೆ. ಆಹಾರ, ಕುಡಿಯುವ ನೀರು, ಔಷಧಿ ಹಾಗೂ ವೈದ್ಯಕೀಯ ನೆರವು ತಲುಪಿಸುವಲ್ಲಿ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಸ್ವಯಂಸೇವಕರು, ಕುಟುಂಬ ಸದಸ್ಯರು, ವಕೀಲರು, ಪತ್ರಕರ್ತರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಯಾವುದೇ ಅಡೆತಡೆಯಿಲ್ಲದೆ ಪ್ರತಿಭಟನಾ ಸ್ಥಳಕ್ಕೆ ತೆರಳಲು ಅವಕಾಶ ಕಲ್ಪಿಸಬೇಕು. ಜೊತೆಗೆ, ಸಂವಿಧಾನ ನೀಡಿರುವ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮೂಲಭೂತ ಹಕ್ಕನ್ನು ಗೌರವಿಸಿ ಅದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII