
ಬೆಂಗಳೂರು, 02 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಸಮೀಪದ ಕಾವೇರಿ ಕ್ರಷರ್ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಬಂಡೆ ಕುಸಿದು 7 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು 40 ಅಡಿ ಎತ್ತರದಿಂದ ಬೃಹತ್ ಬಂಡೆ ಏಕಾಏಕಿ ಕುಸಿದು ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯ ವೇಳೆ ಕ್ವಾರಿಯಲ್ಲಿ 10 ರಿಂದ 15 ಮಂದಿ ಉತ್ತರ ಭಾರತ ಮೂಲದ ಕಾರ್ಮಿಕರು ಹಾಗೂ 2 ರಿಂದ 3 ಮಂದಿ ಸ್ಥಳೀಯರು ಕೆಲಸ ಮಾಡುತ್ತಿದ್ದರು ಎಂದು ಕೇಂದ್ರ ವಲಯ ಐಜಿಪಿ ಗೀರಿಶ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಮೃತಪಟ್ಟವರನ್ನು ಮಧ್ಯಪ್ರದೇಶ ಮೂಲದ ರಾಜಪಾಲಸಿಂಗ್,ಸತ್ಯನಾರಾಯಣ ಸಿಂಗ್,ರಾಮವತಾರ ಸಿಂಗ್,ಭುವನೇಶ್ವರ ಸಿಂಗ್,ರಾಜೇಂದ್ರ ಪ್ರಸಾದ, ಛತ್ತಿಸಗಡ ಮೂಲದ ನೂಹರ ಹಾಗೂ ಕರ್ನಾಟಕ ಮೂಲದ ರಾಮು ಎಂದು ಗುರುತಿಸಲಾಗಿದೆ
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್, 10 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಕ್ವಾರಿಗಳ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ವಿರುದ್ಧವೂ ಪ್ರಕರಣ ದಾಖಲಿಸಬೇಕು. ದುರಂತಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಂತಾಪ
ಘಟನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಬಂಡೆ ಕುಸಿದು ಏಳು ಮಂದಿ ಕಾರ್ಮಿಕರು ಮೃತಪಟ್ಟಿರುವುದು ಅತ್ಯಂತ ದುಃಖಕರ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೆ ಈ ದುಃಖ ಭರಿಸುವ ಶಕ್ತಿ ದೊರಕಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕ್ವಾರಿಗಳಲ್ಲಿ ದುಡಿಯುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಸುರಕ್ಷತೆ ಒದಗಿಸುವುದು ಕ್ವಾರಿ ಮಾಲೀಕರ ಜವಾಬ್ದಾರಿಯಾಗಿದೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.