
ತೆಹ್ರಾನ್/ವಾಷಿಂಗ್ಟನ್, 19 ಜುಲೈ (ಹಿ.ಸ.):
ಆ್ಯಂಕರ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಅಮೆರಿಕ ಸೇನೆ ಸತತ ಎಂಟನೇ ರಾತ್ರಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಅಮೆರಿಕದ ಸೈನಿಕರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಅಮೆರಿಕದ ಕೇಂದ್ರ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವುದು ಹಾಗೂ ಜೋರ್ಡನ್‌ನಲ್ಲಿನ ದಾಳಿಗೆ ಹೊಣೆಗಾರರೆಂದು ಆರೋಪಿಸಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಪಡೆಯ ವಿರುದ್ಧ ಕ್ರಮ ಕೈಗೊಳ್ಳುವುದು ದಾಳಿಯ ಉದ್ದೇಶವಾಗಿದೆ.
ದಕ್ಷಿಣ ಇರಾನ್‌ನ ಸಿರಿಕ್, ಹಾಜಿಯಾಬಾದ್, ಬಂದರ್ ಅಬ್ಬಾಸ್ ಹಾಗೂ ಕೇಶ್‌ಮ್ ದ್ವೀಪದ ಸೇನಾ ನೆಲೆಗಳ ಮೇಲೆ ಯುದ್ಧವಿಮಾನಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ಕಳೆದ ಕೆಲವು ದಿನಗಳಿಂದ ಅಮೆರಿಕ ಇರಾನ್‌ನ ಸೇತುವೆಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣ, ವಿದ್ಯುತ್ ಜಾಲ ಹಾಗೂ ನೀರಿನ ಘಟಕಗಳ ಮೇಲೂ ದಾಳಿ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್, ಕುವೈತ್ ಮತ್ತು ಬಹರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಐದನೇ ನೌಕಾಪಡೆಯ ಕಮಾಂಡ್ ಕೇಂದ್ರಗಳ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾಕ್‌ನ ಇರ್ಬಿಲ್‌ನಲ್ಲಿರುವ ಅಮೆರಿಕದ ವಾಣಿಜ್ಯ ದೂತಾವಾಸವೂ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ.
ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಜೂನ್ 27ರಿಂದ ಜುಲೈ 18ರವರೆಗೆ ನಡೆದ ಅಮೆರಿಕದ ದಾಳಿಗಳಲ್ಲಿ 50 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.