
ಗದಗ, 19 ಜುಲೈ (ಹಿ.ಸ.):
ಆ್ಯಂಕರ್: ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಾರ್ವಜನಿಕರಿಗೆ ನೆರವು ನೀಡುವ ಉದ್ದೇಶದಿಂದ ಗದಗ ನಗರದ ವಾರ್ಡ್ ಸಂಖ್ಯೆ 31ರಲ್ಲಿ ಮತದಾರರ ಸಹಾಯ ಕೇಂದ್ರವನ್ನು ಆರಂಭಿಸಲಾಗಿದೆ. ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ ಹಾಗೂ ನಗರಸಭೆ ಸದಸ್ಯೆ ಶ್ರೀಮತಿ ಶೈಲಾ ಬಾಕಳೆ ಅವರು ಸಹಾಯ ಕೇಂದ್ರವನ್ನು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.
ಗದಗ ಜಿಲ್ಲೆಯಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಬಿರುಸಿನಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಇತರ ಪ್ರಕ್ರಿಯೆಗಳ ಕುರಿತು ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಕೇಂದ್ರ ನಿರಂತರವಾಗಿ ಕಾರ್ಯನಿರ್ವಹಿಸಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಸದಸ್ಯೆ ಶ್ರೀಮತಿ ಶೈಲಾ ಬಾಕಳೆ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಅಮೂಲ್ಯವಾದ ಹಕ್ಕಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರೂ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಇರಬೇಕು ಎಂದು ಹೇಳಿದರು. ವಾರ್ಡ್ ಸಂಖ್ಯೆ 31ರ ನಿವಾಸಿಗಳು ಮಾತ್ರವಲ್ಲದೆ ಗದಗ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾರರೂ ಈ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಯಾವುದೇ ನಿಜವಾದ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ವಾರ್ಡ್ ಸಂಖ್ಯೆ 31ರಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಅವರು ಕರೆ ನೀಡಿದರು.
ಈ ಸಹಾಯ ಕೇಂದ್ರವನ್ನು ನಗರಸಭೆ ಸದಸ್ಯೆ ಶ್ರೀಮತಿ ಶೈಲಾ ಬಾಕಳೆ ಹಾಗೂ ಬಿಜೆಪಿ ಯುವ ಮುಖಂಡ ಸುಧೀರ್ ಕಾಟಿಗಾರ್ ಅವರ ನೇತೃತ್ವದಲ್ಲಿ ಆರಂಭಿಸಲಾಗಿದೆ. ಇಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ, ಅರ್ಜಿ ಭರ್ತಿ, ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ತಿದ್ದುಪಡಿ ಸೇರಿದಂತೆ ಎಸ್ಐಆರ್ ಪ್ರಕ್ರಿಯೆಗೆ ಅಗತ್ಯವಿರುವ ವಿವಿಧ ಸೇವೆಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಧೀರ್ ಕಾಟಿಗಾರ್, ಗದಗ ವಿಧಾನಸಭಾ ಕ್ಷೇತ್ರದ ಎಸ್ಐಆರ್ ಪ್ರಮುಖ ಅನಿಲ್ ಅಬಿಗೇರಿ, ಯುವ ಮುಖಂಡರಾದ ವೆಂಕಟೇಶ್ ಹಬೀಬಿ, ರವಿಕಾಂತ್ ಅಂಗಡಿ, ಬೂತ್ ಅಧ್ಯಕ್ಷರಾದ ಲೋಕನಾಥ ಬದಿ, ಕೃಷ್ಣಾ ಲದ್ವಾ, ಬಿಎಲ್ಒ-2 ಶ್ರೀಕಾಂತ್ ಬಾಕಳೆ, ನಾರಾಯಣ ಟಿಕನದಾರ್, ರವಿ ಚೌಹಾಣ್, ಹಿರಿಯ ಮುಖಂಡರಾದ ಪರಶುರಾಮ ಬದಿ, ಪುಂಡಲೀಕ ಬಸವರಾಜ, ರಾಜು ಕಾಟಿಗಾರ್, ರಾಜು ಖಟವಟಿ, ಸುನೀಲ್ ಬಸವಾ, ಮಂಜು ಹಬೀಬಿ, ವೀರೇಶ್ ಪ್ರಭು, ಮಹೇಶ್ ಶಿವಶಿಪ್ಪಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಹಾಯ ಕೇಂದ್ರ ಆರಂಭಗೊಂಡಿರುವುದರಿಂದ ಮತದಾರರಿಗೆ ಒಂದೇ ಸ್ಥಳದಲ್ಲಿ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ದೊರೆಯಲಿದ್ದು, ಎಸ್ಐಆರ್ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP