
ನವದೆಹಲಿ, 19 ಜುಲೈ (ಹಿ.ಸ.):
ಆ್ಯಂಕರ್:
1857ರ ಪ್ರಥಮ ಸ್ವಾತಂತ್ರ್ಯ ಸಮರದ ಮುಂಚೂಣಿ ಕ್ರಾಂತಿಕಾರಿ ಹಾಗೂ ಅಮರ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ ಅವರ ಜಯಂತಿ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಭಾನುವಾರ ಗೌರವ ನಮನ ಸಲ್ಲಿಸಿದರು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು, 1857ರ ಸ್ವಾತಂತ್ರ್ಯ ಸಮರದಲ್ಲಿ ಮಂಗಲ್ ಪಾಂಡೆ ತೋರಿದ ಅಪ್ರತಿಮ ಧೈರ್ಯ ಮತ್ತು ದೇಶಭಕ್ತಿ ಬ್ರಿಟಿಷರ ಆಳ್ವಿಕೆಯ ಅಡಿಪಾಯವನ್ನೇ ಅಲುಗಾಡಿಸಿತು ಎಂದು ಹೇಳಿದರು. ಅವರ ತ್ಯಾಗವು ಮುಂದಿನ ಪೀಳಿಗೆಯ ಕ್ರಾಂತಿಕಾರರಿಗೆ ಪ್ರೇರಣೆಯಾಗಿ, ಇಂದಿಗೂ ಕೋಟ್ಯಂತರ ಭಾರತೀಯರಲ್ಲಿ ದೇಶಭಕ್ತಿಯ ಚೈತನ್ಯ ಮೂಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಸ್ವಾಭಿಮಾನ ಮತ್ತು ಗೌರವದ ರಕ್ಷಣೆಗೆ ಮಂಗಲ್ ಪಾಂಡೆ ತಮ್ಮ ಸರ್ವಸ್ವವನ್ನೇ ಅರ್ಪಿಸಿದರು. ಅವರ ಸಾಹಸಮಯ ಜೀವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದ್ದು, ಅವರ ಶೌರ್ಯಗಾಥೆ ಮುಂದಿನ ಪೀಳಿಗೆಗಳಿಗೂ ರಾಷ್ಟ್ರಭಕ್ತಿಯ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ವಿದೇಶಿ ಆಳ್ವಿಕೆಯ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದ ಮಂಗಲ್ ಪಾಂಡೆ ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದರು. ಅವರ ತ್ಯಾಗ, ಶೌರ್ಯ ಮತ್ತು ರಾಷ್ಟ್ರಸೇವೆಯ ಮನೋಭಾವ ದೇಶ ನಿರ್ಮಾಣಕ್ಕೆ ಸದಾ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 1857ರ ಕ್ರಾಂತಿಗೆ ನಾಂದಿ ಹಾಡಿದ ಮಂಗಲ್ ಪಾಂಡೆ ಜನರಲ್ಲಿ ರಾಷ್ಟ್ರೀಯ ಚೇತನ ಮೂಡಿಸಿದರು. ದೇಶದ ಸಂಸ್ಕೃತಿ, ಸ್ವಾಭಿಮಾನ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಅವರ ಬಲಿದಾನದಿಂದ ಹೊತ್ತ ಕ್ರಾಂತಿಯ ಕಿಡಿ ನಂತರ ಭಾರತದ ಸ್ವಾತಂತ್ರ್ಯದ ಜ್ವಾಲೆಯಾಗಿ ರೂಪುಗೊಂಡಿತು ಎಂದು ಹೇಳಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೂಡ ಮಂಗಲ್ ಪಾಂಡೆ ಅವರಿಗೆ ಗೌರವ ನಮನ ಸಲ್ಲಿಸಿ, ಅವರ ತ್ಯಾಗ ಮತ್ತು ಬಲಿದಾನವು ರಾಷ್ಟ್ರಹಿತಕ್ಕಾಗಿ ಸೇವೆ ಸಲ್ಲಿಸಲು ಪ್ರತಿಯೊಬ್ಬ ಭಾರತೀಯನಿಗೂ ಶಾಶ್ವತ ಪ್ರೇರಣೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.