
ಗದಗ, 19 ಜುಲೈ (ಹಿ.ಸ.)
ಆ್ಯಂಕರ್:- ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಾ.ಜಿ ಪರಮೇಶ್ವರ ಅವರು ಭಾನುವಾರ ಜುಲೈ 19 ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರೊಂದಿಗೆ ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಉದ್ಭವಿಸಿರುವ ಬರ ಪರಿಸ್ಥಿತಿ ಯ ಬಗ್ಗೆ ಸತತ ಮೂರು ಗಂಟೆಗಳಿಗು ಹೆಚ್ಚು ಕಾಲ ಜಂಟಿಯಾಗಿ ಅವಲೋಕಿಸಿದರು.
ಬೆಂಗಳೂರಿನಲ್ಲಿ ಇಂಧನ ಸಚಿವರಾದ ಕೆ.ಜೆ. ಜಾರ್ಜ್, ನೀರಾವರಿ ಸಚಿವರಾದ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಆರೋಗ್ಯ ಸಚಿವರಾದ ಯು ಟಿ ಖಾದರ್, ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾದ ವಿಡಿಯೋ ಸಂವಾದ ಮಧ್ಯಾಹ್ನ 2.45ವರೆಗೆ ನಡೆಯಿತು.
ಸಭೆಯಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ವಿಪತ್ತು ಎದುರಾದ ಸಂದರ್ಭದಲ್ಲಿ
ಆಡಳಿತದ ರೀತಿ ಮತ್ತು ಅಧಿಕಾರಿಗಳು ಹಾಗು ಸಿಬ್ಬಂದಿ ತಂಡವಾಗಿ ಮುನ್ನುಗ್ಗಬೇಕು ಎಂದು ಆಡಳಿತ ಮತ್ತು ಟೀಂ ವರ್ಕ್ ಬಗ್ಗೆ ಸಿಎಂ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪಾಠ ಮಾಡಿದರು.
ಸರ್ಕಾರವು ಜನರ ಬಗ್ಗೆ ಕಾಳಜಿ ವಹಿಸುತ್ತಿದೆ ಎಂದು ಜನತೆಗೆ ಗೊತ್ತಾಗಬೇಕು. ವಿಪತ್ತು ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕೆ ಸರ್ಕಾರ ಸನ್ನದ್ಧವಾಗಿದೆ. ನಮ್ಮಲ್ಲಿ ಹಣಕಾಸಿನ ಲಭ್ಯತೆ ಇದೆ. ಸಭೆಗಳು ನಡೆಯುತ್ತಿವೆ. ಕುಡಿವ ನೀರು ಕೊಡುತ್ತಿದ್ದೇವೆ ಎಂದು ಜನತೆಗೆ ಮನವರಿಕೆ ಆಗಬೇಕು. ಸರ್ಕಾರದ ಧ್ವನಿಯಂತೆ ಈ ರೀತಿಯ ಮಾಹಿತಿಯನ್ನು ಅಧಿಕಾರಿಗಳು ಜನತೆಗೆ ಒದಗಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಜಿಓ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯ ವೈಖರಿ, ಕಾರ್ಯ ಸಾಮರ್ಥ್ಯದ ಬಗ್ಗೆ ಮುಖ್ಯಮಂತ್ರಿಗಳು ಮನವರಿಕೆ ಮಾಡಿದರು.
ರಾಜ್ಯದಲ್ಲಿ ಎದುರಾದ ಬರ ಪರಿಸ್ಥಿತಿಯ ಪರಿಣಾಮಗಳ ಬಗ್ಗೆ ಅರಿತು ಗಂಭೀರವಾಗಿ ಕಾರ್ಯಯೋಜನೆ ರೂಪಿಸಬೇಕು. ಈ ದಿಶೆಯಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ಜಂಟಿ ಕೃಷಿ ನಿರ್ದೇಶಕರು, ಜಂಟಿ ತೋಟಗಾರಿಕಾ ನಿರ್ದೇಶಕರು, ಪಶುಪಾಲನ ಇಲಾಖೆಯ ಅಧಿಕಾರಿಗಳ ಪ್ರತಿ ದಿನದ ಮೂಮೆಂಟ್ ಬೆಂಗಳೂರಿಗೆ ತಲುಪಬೇಕು. ಪ್ರಜಾ ಸೇವಾ ಇಲಾಖೆ, ಕಂದಾಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿಯಮಿತವಾಗಿ ವರದಿ ಕೊಡಬೇಕು ಎಂದು ಸಿಎಂ ಅವರು ನಿರ್ದೇಶನ ನೀಡಿದರು.
ಬರದ ಹಿನ್ನೆಲೆಯಲ್ಲಿ ಅಗತ್ಯ ಇರುವ ಜಿಲ್ಲೆಗಳಿಗೆ ಕೂಡಲೇ
ಹಣ ಪೂರೈಸಲು ಈಗಾಗಲೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿನ ಎಲ್ಲ ಜಲಾಶಯಗಳಲ್ಲಿನ ನೀರಿನ ಮಟ್ಟದ ಪರಿಸ್ಥಿತಿಯ ಬಗ್ಗೆ ವಾರಕ್ಕೊಂದು ಸರತಿ ಮಾಹಿತಿ ನೀಡುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ನಿಯಮಿತವಾಗಿ ಮಾಡಬೇಕು ಎಂದು ಸೂಚನೆ ನೀಡಿದರು.
ಅಗತ್ಯವಿರುವ ಕಡೆ ಮೇವು ಬ್ಯಾಂಕಿನ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿದರು.ಮಳೆ ಕೊರತೆ ಮುಂದುವರೆದಲ್ಲಿ ಮತ್ತಷ್ಟು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಲಿದೆ. ಈಗಿನ ವಾತಾವರಣವು ಅಪಾಯದ ಮುನ್ಸೂಚನೆ ನೀಡುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ಸನ್ನದ್ದರಾಗಬೇಕು ಎಂದು ಸಿಎಂ ಅವರು ಸೂಚನೆ ನೀಡಿದರು.
ಸದ್ಯದಲ್ಲೇ ರಾಜ್ಯಕ್ಕೆ ಬರ ಪರಿಸ್ಥಿತಿ ಅವಲೋಕನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಬರಲಿದ್ದು, ತಂಡಕ್ಕೆ ಅತ್ಯಗತ್ಯ ಮಾಹಿತಿ ಕೊಡಲು ತಯಾರಿ ಮಾಡಿಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದರು.
ಕಲಬುರಗಿ, ಬೆಳಗಾವಿನಲ್ಲಿ ಸಂಚರಿಸಿ ಬರದ ಅವಲೋಕನ ನಡೆಸಲಾಗಿದೆ. ಇದೆ ರೀತಿ ರಾಜ್ಯದ ಬೇರೆ ಬೇರೆ ಕಡೆಗೆ ಸಂಚರಿಸಿ ಬರ ಅವಲೋಕನ ಸಭೆ ನಡೆಸಲಾಗುವುದು ಎಂದು ಸಿಎಂ ಅವರು ಮಾಹಿತಿ ನೀಡಿದರು.
ಜನತೆಗೆ ಶುದ್ಧ ನೀರು ಪೂರೈಸಿ.
ರಾಜ್ಯದ ಜನತೆಗೆ ಶುದ್ಧ ಕುಡಿವ ನೀರು ಪೂರೈಸಬೇಕು. ಈ ದಿಶೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಎಸ್ ಐಆರ್ ವ್ಯವಸ್ಥಿತವಾಗಿ ನಡೆಸಿ
ಎಸ್ ಐ ಆರ್ ಕಾರ್ಯವು ಎಲ್ಲ ಜಿಲ್ಲೆಗಳಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಮಾತನಾಡಿ, ಸುಮಾರು 75 ವರ್ಷಗಳ ಹಿಂದೆ ರಾಜ್ಯದಲ್ಲಿ ಇಂತಹ ಬರದ ದುಸ್ತಿತಿ ಎದುರಾಗಿತ್ತು. 1965 ಮತ್ತು 1972ರಲ್ಲಿ ಸಹ ಇಂತಹ ಬರದ ಛಾಯೆ ರಾಜ್ಯದಲ್ಲಿ ಆವರಿಸಿತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಉಷ್ಣಾಂಶದ ಪ್ರಮಾಣ ಏರಿಕೆ ಆಗುತ್ತಿದೆ. ಹೆಚ್ಚಿನ ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಮುಂದುವರೆದಿದೆ. ರಾಜ್ಯದ ಅಂದಾಜು 88 ತಾಲೂಕುಗಳಲ್ಲಿ ಅಂತರ್ಜಲ ನೀರಿನ ಮಟ್ಟ ಕುಸಿತಿದೆ ಎಂದು ವರದಿಯಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು ಈ ಗಂಭೀರತೆಯನ್ನು ಅರಿತು ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ ಸಭೆ ನಡೆಸಿ ಬರದ ಪರಿಸ್ಥಿತಿ ಬಗ್ಗೆ ಅವಲೋಕಿಸಿದ್ದಾರೆ.
ಜನರಿಗೆ ಕುಡಿವ ನೀರು ಕೊಡಲೇಬೇಕು. ಡ್ಯಾಮಿನ ನೀರನ್ನು ಕುಡಿಯಲು ಮಾತ್ರ ಬಳಸಬೇಕು ಎಂದು ಎಲ್ಲ ಡ್ಯಾಮಿನ ಅಧಿಕಾರಿಗಳಿಗೆ ಸಿಎಂ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ.ವಿಪತ್ತು ನಿರ್ವಹಣೆಗಾಗಿ
ಆರ್ ಡಿ ಪಿ ಆರ್ ಇಲಾಖೆಯಿಂದ ಹಣಕಾಸಿನ ನೆರವು ಒದಗಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟನಲ್ಲಿ ಅಂದಾಜು 397 ಕೋಟಿ ರೂ ಹಣಯಿದೆ.
ರಾಜ್ಯದ ಯಾದಗಿರಿ, ವಿಜಯಪುರ ಸೇರಿದಂತೆ ಇನ್ನೀತರ ಕಡೆ ಜನತೆ ಗುಳೆ ಹೊರಟಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ. ಜನತೆ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಜಿಲ್ಲೆಗಳಲ್ಲಿ ಕೂಡಲೇ ವಿಬಿ- ಜಿ ರಾಮ ಜಿ ಯೋಜನೆಯ ಕಾರ್ಯಗಳು ಆರಂಭವಾಗಬೇಕು. ರಾಜ್ಯದ 487 ಗ್ರಾಮ ಪಂಚಾಯತಗಳಲ್ಲಿ ಜನತೆಗೆ ಉದ್ಯೋಗ ಕೊಡುವ ಕಾರ್ಯಗಳು ಆರಂಭವಾಗಿವೆ. ಬರ ಪರಿಸ್ಥಿತಿಯ ಗಂಭೀರತೆ ಅರಿತು ರಾಜ್ಯದ 2446 ಗ್ರಾಪಂಗಳಲ್ಲೂ ಕೂಡಲೇ ವಿಬಿ ಜಿ ರಾಮ್ ಜಿ ಯೋಜನೆಯ ಕಾರ್ಯ ಆರಂಭಿಸಲು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ರಾಜ್ಯದ ಎಲ್ಲ ಸಿಇಓಗಳಿಗೆ ಸೂಚನೆ ನೀಡಿದರು.
ಜಾನುವಾರುಗಳಿಗೆ ಸಹ ಕುಡಿವ ನೀರು ಮತ್ತು ಮೇವು ಪೂರೈಕೆಗೆ ಸಹ ಒತ್ತು ಕೊಡಬೇಕು. ಈ ಎಲ್ಲದರ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿ ಕ್ರಮ ವಹಿಸಬೇಕು ಎಂದು ಉಪ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಇದಕ್ಕು ಮೊದಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾತನಾಡಿ, ಫಲಾನುಭವಿಗಳ ಅಂಕಿ ಸಂಖ್ಯೆಯ ಪ್ರತಿಯೊಂದು ಮಾಹಿತಿಯು ಪ್ರತಿಯೊಬ್ಬ ತಾಲೂಕು ಅಧಿಕಾರಿಗಳಲ್ಲಿ ಇರುವ ಹಾಗೆ ಸನ್ನದ್ದರಾಗಿರಲು ಗೃಹ ಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ, ಗೃಹಜ್ಯೊತಿ ಯೋಜನೆಗಳ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರಿಂದ ನಿರಂತರ ಸೂಚನೆ ಹೋಗಬೇಕು ಎಂದು ಕಾರ್ಯದರ್ಶಿಗಳು ಸೂಚನೆ ನೀಡಿದರು.
ಡಿಡಿಪಿಐಗಳಿಗೆ ಎಚ್ಚರಿಕೆ
ರಾಜ್ಯದ ಕೆಲ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯ ಸಮಸ್ಯೆ ತಪ್ಪಬೇಕು. ಇರುವ ಶಿಕ್ಷಕರಿಂದ ಸರಿಯಾಗಿ ಪಾಠಬೋಧನೆ ನಡೆಯಬೇಕು. ಕೆಲ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎನ್ನುವ ದೂರುಗಳ ಬಗ್ಗೆ ಗಮನ ಹರಿಸಿ, ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಕಾರ್ಯದರ್ಶಿಗಳು, ರಾಜ್ಯದ ಎಲ್ಲ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐಗಳಿಗೆ ಎಚ್ಚರಿಕೆ ನೀಡಿದರು.
ವಿಡಿಯೊ ಸಂವಾದದಲ್ಲಿ ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಡಿಸಿಎಪ್ ಸಂತೋಷ ಕುಮಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಜಿ ಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಸೇರಿದಂತೆ ಆಯಾ ತಾಲೂಕಿನ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಸಭೆಯಲ್ಲಿ ಗದಗ ಜಿಲ್ಲೆಯಿಂದ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದ್ದನ್ನು ಮುಖ್ಯಮಂತ್ರಿ ಶಿವಕುಮಾರ ಅವರು ವಿಶೇಷವಾಗಿ ಪ್ರಶಂಸಿಸಿದರು. ಗದಗ ಜಿಲ್ಲೆಯಿಂದ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ರಾಜ್ಯದ ಪ್ರತಿಯೊಬ್ಬ ಅಧಿಕಾರಿ ಹಾಗೂ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಬರ ನಿರ್ವಹಣೆಯ ಬಗ್ಗೆ ಸಮಗ್ರ ಅರಿವು ಇರಬೇಕು. ಅದಕ್ಕಾಗಿ ಇಂತಹ ಸಮನ್ವಯ ಸಭೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP