
ಗದಗ, 19 ಜುಲೈ (ಹಿ.ಸ.)
ಆ್ಯಂಕರ್:- ಉತ್ತರ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕುಸ್ತಿ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಗದಗ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಹಾಗೂ ವಿವಿಧ ಕುಸ್ತಿ ಸಂಘಟನೆಗಳು ನಡೆಸಿದ ನಿರಂತರ ಹೋರಾಟಕ್ಕೆ ಮಹತ್ವದ ಯಶಸ್ಸು ದೊರೆತಿದೆ. ಗದಗದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯದಲ್ಲಿ ಜಾರಿಗೊಳಿಸಲು ಉದ್ದೇಶಿಸಿದ್ದ ‘ಪಿರಮಿಡ್ ಮಾದರಿ’ ಕ್ರೀಡಾ ವಸತಿ ಯೋಜನೆಯನ್ನು ರಾಜ್ಯ ಸರ್ಕಾರ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ನಿರ್ಧಾರದಿಂದ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ನೂರಾರು ಕುಸ್ತಿ ಪ್ರತಿಭೆಗಳಿಗೆ ಮತ್ತೆ ಆಶಾಕಿರಣ ಮೂಡಿದೆ.
ಗದಗ ಜಿಲ್ಲೆಯಲ್ಲಿ ಕಳೆದ ಸುಮಾರು 25 ವರ್ಷಗಳಿಂದ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕ್ರೀಡಾ ವಸತಿ ನಿಲಯದಲ್ಲಿ ಉಚಿತ ವಸತಿ, ಆಹಾರ, ಶಿಕ್ಷಣ ಹಾಗೂ ಗುಣಮಟ್ಟದ ಕುಸ್ತಿ ತರಬೇತಿ ನೀಡಲಾಗುತ್ತಿತ್ತು. ಈ ವ್ಯವಸ್ಥೆಯ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅನೇಕ ಕುಸ್ತಿಪಟುಗಳು ಹೊರಹೊಮ್ಮಿದ್ದಾರೆ. ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಈ ಯೋಜನೆ ಜೀವನ ರೂಪಿಸಿದ ಕೇಂದ್ರವಾಗಿ ಪರಿಣಮಿಸಿತ್ತು.
ಆದರೆ ಇತ್ತೀಚೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಾರಿಗೆ ತರಲು ಮುಂದಾದ ‘ಬುನಾದಿ ತರಬೇತಿ’ ಅಥವಾ ‘ಪಿರಮಿಡ್ ಮಾದರಿ’ ಯೋಜನೆಯಡಿ ಕುಸ್ತಿ ತರಬೇತಿಯನ್ನು ಕೇವಲ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸುವ ನಿರ್ಧಾರ ಕೈಗೊಂಡಿತ್ತು.
ಈ ಹೊಸ ನಿಯಮದಿಂದ 8, 9 ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಸತಿ ಮತ್ತು ತರಬೇತಿ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಹಲವು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದ ಪ್ರತಿಭಾವಂತ ಕುಸ್ತಿಪಟುಗಳ ಕ್ರೀಡಾ ಜೀವನವೇ ಸಂಕಷ್ಟಕ್ಕೆ ಸಿಲುಕುವ ಆತಂಕ ವ್ಯಕ್ತವಾಗಿತ್ತು.
ಇದಕ್ಕೂ ಮುನ್ನವೇ ಗದಗ ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ಕಳೆದ ಒಂದು ವರ್ಷದಿಂದ ಪರಿಣಿತ ಕುಸ್ತಿ ತರಬೇತುದಾರರ ಕೊರತೆ ಎದುರಾಗಿದ್ದು, ಸೂಕ್ತ ಕೋಚ್ ಇಲ್ಲದೆ ಕ್ರೀಡಾಪಟುಗಳು ತರಬೇತಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಎರಡು ಸಮಸ್ಯೆಗಳು ಒಂದೇ ಸಮಯದಲ್ಲಿ ಎದುರಾಗಿದ್ದರಿಂದ ಜಿಲ್ಲೆಯ ಕುಸ್ತಿ ವಲಯದಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರ ನೇತೃತ್ವದಲ್ಲಿ ಗದಗ ಜಿಲ್ಲಾ ಕುಸ್ತಿಪಟುಗಳ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಕ್ರೀಡಾ ಜಗಲಿ ಫೌಂಡೇಶನ್, ಹಿರಿಯ ಪೈಲ್ವಾನರು, ಪಾಲಕರು ಹಾಗೂ ಕುಸ್ತಿ ಅಭಿಮಾನಿಗಳು ಒಗ್ಗೂಡಿ ಸರ್ಕಾರದ ಗಮನ ಸೆಳೆಯುವ ಹೋರಾಟ ಆರಂಭಿಸಿದರು. ಹಳೆಯ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಯಾವುದೇ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಗದಗ ಜಿಲ್ಲೆ ಕುಸ್ತಿ ಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅನೇಕ ಸಾಧಕರನ್ನು ನೀಡಿರುವ ಜಿಲ್ಲೆಯಾಗಿದೆ ಎಂದು ಉಲ್ಲೇಖಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಪ್ರೇಮಾ ಹುಚ್ಚಣ್ಣನವರ್, ಶಾರದಾ ಬೇಲೇರಿ, ಪಾಲಾಕ್ಷಗೌಡ ಬೇಲೇರಿ, ಪ್ರಶಾಂತಗೌಡ ಬೇಲೇರಿ, ಅನಿಲ್ ದರ್ಗಿ, ರಾಹುಲ್ ವಸಂತ ಸಿದ್ದಮ್ಮನಹಳ್ಳಿ, ಬಸೀರ ವಕಾರದ ಸೇರಿದಂತೆ ಅನೇಕ ಕ್ರೀಡಾಪಟುಗಳು ಇದೇ ಕ್ರೀಡಾ ವಸತಿ ನಿಲಯದಿಂದ ಬೆಳೆದು ಬಂದಿದ್ದಾರೆ. ಇಂತಹ ಪರಂಪರೆಗೆ ಧಕ್ಕೆಯಾಗುವ ರೀತಿಯ ಯಾವುದೇ ಯೋಜನೆ ಸೂಕ್ತವಲ್ಲ ಎಂದು ಸಂಘಟನೆಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟವು.
ಈ ಹೋರಾಟಕ್ಕೆ ಮಾಜಿ ಸಚಿವ ಎಚ್.ಕೆ. ಪಾಟೀಲ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತ್ವರಿತವಾಗಿ ಸ್ಪಂದಿಸಿದರು. ಸಚಿವರ ಸೂಚನೆಯ ಮೇರೆಗೆ ಬೆಂಗಳೂರು ಹಾಗೂ ಗದಗ ಜಿಲ್ಲೆಯ ಕ್ರೀಡಾ ಇಲಾಖೆಯ ಅಧಿಕಾರಿಗಳು ವಿಷಯವನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.
ಪರಿಣಾಮವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನ ಕಾರ್ಯದರ್ಶಿ ಜಾಹೀದಾ ಎನ್. ಗಚ್ಛಿನಮಹಲ್ ಅವರು ಹೊರಡಿಸಿದ ಅಧಿಕೃತ ಸುತ್ತೋಲೆ (ಸಂಖ್ಯೆ: ವೈಎಸ್ಡಿ-ಸಿಡಿಎನ್/487/2025) ಮೂಲಕ ಕ್ರೀಡಾ ವಸತಿ ನಿಲಯಗಳನ್ನು ‘ಪಿರಮಿಡ್ ಮಾದರಿ’ಯಲ್ಲಿ ಪುನರ್ರಚಿಸುವ ಆದೇಶವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಪ್ರಕಟಿಸಲಾಗಿದೆ.
ಈ ನಿರ್ಧಾರವನ್ನು ಜಿಲ್ಲೆಯ ಕುಸ್ತಿ ವಲಯ ಸ್ವಾಗತಿಸಿದ್ದು, ಗ್ರಾಮೀಣ ಪ್ರತಿಭೆಗಳ ಭವಿಷ್ಯವನ್ನು ಉಳಿಸಿದ ಸರ್ಕಾರದ ಕ್ರಮವನ್ನು ಪ್ರಶಂಸಿಸಿದೆ.
ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ, ಗದಗ ಜಿಲ್ಲಾ ಕುಸ್ತಿಪಟುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ, ಹಿರಿಯ ಪೈಲ್ವಾನರಾದ ರಮೇಶ್ ಬಾವಿ, ಸೋಮಪ್ಪ ಮೇಲ್ಮನಿ, ಬಾಲೇಸಾಬ್ ನದಾಫ್, ಪರಶುರಾಮ್ ಹೇಟ್ಟಿ, ಮಾಬುಸಾಬ ಹರಿಯಾಣ, ಕುಸ್ತಿ ಪೈಲ್ವಾನ್ ಸಂಘದ ಹಿರಿಯ ಅಧ್ಯಕ್ಷ ದೇವಪ್ಪ ಗಡೇದ ಸೇರಿದಂತೆ ಅನೇಕ ಹಿರಿಯರು, ಪಾಲಕರು ಹಾಗೂ ಕ್ರೀಡಾಭಿಮಾನಿಗಳು ಮಾಜಿ ಸಚಿವ ಎಚ್.ಕೆ. ಪಾಟೀಲ, ಡಾ. ಜಿ. ಪರಮೇಶ್ವರ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆದರೆ ಹೋರಾಟ ಇಲ್ಲಿಗೆ ಮುಗಿದಿಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ. ಗದಗ ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ಕಳೆದ ಒಂದು ವರ್ಷದಿಂದ ಖಾಲಿ ಇರುವ ಅನುಭವಿ ಕುಸ್ತಿ ಕೋಚ್ ಹುದ್ದೆಯನ್ನು ತಕ್ಷಣ ಭರ್ತಿ ಮಾಡಬೇಕು. ಗುಣಮಟ್ಟದ ತರಬೇತಿ, ಮೂಲಸೌಕರ್ಯ ಹಾಗೂ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಹಳೆಯ ಮಾದರಿಯಲ್ಲಿಯೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ಮತ್ತು ವಸತಿ ವ್ಯವಸ್ಥೆ ಮುಂದುವರಿಯಬೇಕು ಎಂದು ಮತ್ತೊಮ್ಮೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಮಟ್ಟದಲ್ಲೇ ಕುಸ್ತಿ ಕ್ರೀಡೆಗೆ ಹೆಸರುವಾಸಿಯಾಗಿರುವ ಗದಗ ಜಿಲ್ಲೆಯ ಕುಸ್ತಿ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರದ ಈ ತಾತ್ಕಾಲಿಕ ತಡೆ ಆದೇಶ ಮಹತ್ವದ ಬೆಳವಣಿಗೆಯಾಗಿದ್ದು, ಗ್ರಾಮೀಣ ಭಾಗದ ನೂರಾರು ಬಡ ಪ್ರತಿಭಾವಂತ ಕ್ರೀಡಾಪಟುಗಳ ಭವಿಷ್ಯಕ್ಕೆ ಹೊಸ ಭರವಸೆ ಮೂಡಿಸಿದೆ. ಈಗ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿದು ಹಳೆಯ ವ್ಯವಸ್ಥೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಬೇಕೆಂಬುದು ಜಿಲ್ಲೆಯ ಕುಸ್ತಿ ವಲಯದ ಪ್ರಮುಖ ಬೇಡಿಕೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP