ಮಳೆ ಕೊರತೆ ಮೆಕ್ಕೆಜೋಳ ನಾಶ ಮಾಡಿದ ರೈತ
ಗದಗ, 19 ಜುಲೈ (ಹಿ.ಸ.) ಆ್ಯಂಕರ್:- ಮುಂಗಾರು ಆರಂಭದಲ್ಲಿ ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಸಾಲ ಮಾಡಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಮಳೆ ಕೊರತೆಯಿಂದ ಸಂಪೂರ್ಣ ಒಣಗುವ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದ ರೈತ ಶಿವಪ್ಪ ಬಂಡಿ ಅವರು ತಮ್ಮ ಐದು ಎ
ಫೋಟೋ


ಗದಗ, 19 ಜುಲೈ (ಹಿ.ಸ.)

ಆ್ಯಂಕರ್:- ಮುಂಗಾರು ಆರಂಭದಲ್ಲಿ ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಸಾಲ ಮಾಡಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಮಳೆ ಕೊರತೆಯಿಂದ ಸಂಪೂರ್ಣ ಒಣಗುವ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದ ರೈತ ಶಿವಪ್ಪ ಬಂಡಿ ಅವರು ತಮ್ಮ ಐದು ಎಕರೆ ಜಮೀನಿನಲ್ಲಿದ್ದ ಮೆಕ್ಕೆಜೋಳ ಬೆಳೆಯನ್ನು ಸ್ವತಃ ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದರು. ಈ ಘಟನೆ ಜಿಲ್ಲೆಯ ರೈತರ ದುಸ್ಥಿತಿಗೆ ಕನ್ನಡಿ ಹಿಡಿದಿದ್ದು, ಗದಗ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕೆಂಬ ಒತ್ತಾಯ ಮತ್ತಷ್ಟು ಬಲಗೊಂಡಿದೆ.

ರೈತ ಶಿವಪ್ಪ ಬಂಡಿ ಅವರು ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೆಚ್ಚಿನ ನಿರೀಕ್ಷೆಯೊಂದಿಗೆ ಐದು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಪ್ರತಿ ಎಕರೆಗೆ ಸುಮಾರು ₹25 ಸಾವಿರದಿಂದ ₹35 ಸಾವಿರದವರೆಗೆ ವೆಚ್ಚ ಮಾಡಿ ಬೀಜ, ಗೊಬ್ಬರ, ಔಷಧಿ ಹಾಗೂ ಕೃಷಿ ಕಾರ್ಮಿಕರ ಖರ್ಚು ಭರಿಸಿದ್ದರು. ಆದರೆ ನಂತರ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಸುಮಾರು ಒಂದೂವರೆ ತಿಂಗಳಿನ ಬೆಳೆ ಸಂಪೂರ್ಣ ಒಣಗುವ ಹಂತಕ್ಕೆ ತಲುಪಿತು.

ಬೆಳೆ ಉಳಿಯುವ ಯಾವುದೇ ಸಾಧ್ಯತೆ ಇಲ್ಲ ಎಂಬುದು ಖಚಿತವಾದ ಬಳಿಕ ರೈತ ಶಿವಪ್ಪ ಬಂಡಿ ಅವರು ಮನಸ್ಸಿಗೆ ನೋವು ಮಾಡಿಕೊಂಡೇ ತಮ್ಮ ಕೈಯಾರೆ ಬೆಳೆ ನಾಶಪಡಿಸಿದರು. ಹಲವು ತಿಂಗಳ ಪರಿಶ್ರಮ ಹಾಗೂ ಲಕ್ಷಾಂತರ ರೂಪಾಯಿ ಹೂಡಿಕೆ ಕ್ಷಣಾರ್ಧದಲ್ಲಿ ಮಣ್ಣಾದ ದೃಶ್ಯ ಕಂಡು ಗ್ರಾಮಸ್ಥರು ಹಾಗೂ ರೈತರು ಕೂಡ ತೀವ್ರ ಬೇಸರ ವ್ಯಕ್ತಪಡಿಸಿದರು.

ರೈತ ಶಿವಪ್ಪ ಬಂಡಿ ಮಾತನಾಡಿ, ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಸಾಲ ಮಾಡಿ ಬೆಳೆ ಬೆಳೆದಿದ್ದೆ. ಆದರೆ ಮಳೆ ಬಾರದ ಕಾರಣ ಸಂಪೂರ್ಣ ಬೆಳೆ ಹಾಳಾಗಿದೆ. ಈಗ ಮಳೆಯಾದರೂ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಗದಗ ಜಿಲ್ಲೆಯ ಏಳು ತಾಲೂಕುಗಳಲ್ಲಿಯೂ ಮಳೆ ಕೊರತೆಯಿಂದ ಮೆಕ್ಕೆಜೋಳ, ಹೆಸರು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಕೃಷಿಗಾಗಿ ಮಾಡಿದ ಹೂಡಿಕೆ ಸಂಪೂರ್ಣ ನಷ್ಟವಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಸಾಲ ತೀರಿಸುವುದು ಹೇಗೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ರೈತ ಮುಖಂಡ ಮಾರುತಿ ಸೇರಿದಂತೆ ಹಲವರು ಮಾತನಾಡಿ, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಸರ್ಕಾರ ತಕ್ಷಣವೇ ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು, ಬೆಳೆ ವಿಮೆ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಹಾಗೂ ರೈತರ ಕೃಷಿ ಸಾಲ ಮನ್ನಾ ಸೇರಿದಂತೆ ತುರ್ತು ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮುಂಡರಗಿ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ನಾಶಪಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ರೈತರ ಈ ದುಸ್ಥಿತಿ ಸರ್ಕಾರದ ಗಮನ ಸೆಳೆದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande