ಗದಗ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆಗೆ ಒತ್ತಾಯ
ಗದಗ, 19 ಜುಲೈ (ಹಿ.ಸ.) ಆ್ಯಂಕರ್:- ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಭರವಸೆಯಿಂದ ಬಿತ್ತನೆ ನಡೆಸಿದ್ದ ಗದಗ ಜಿಲ್ಲೆಯ ರೈತರು ಈಗ ಭೀಕರ ಬರಗಾಲದ ಹೊಡೆತಕ್ಕೆ ತತ್ತರಿಸಿದ್ದಾರೆ. ಕಳೆದ ಹಲವು ವಾರಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ ಹೆಸರು, ಶೇಂಗಾ, ಮೆಕ್ಕೆಜೋಳ ಸೇರಿದಂತೆ ವಿವಿಧ ಬ
ಫೋಟೋ


ಗದಗ, 19 ಜುಲೈ (ಹಿ.ಸ.)

ಆ್ಯಂಕರ್:- ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಭರವಸೆಯಿಂದ ಬಿತ್ತನೆ ನಡೆಸಿದ್ದ ಗದಗ ಜಿಲ್ಲೆಯ ರೈತರು ಈಗ ಭೀಕರ ಬರಗಾಲದ ಹೊಡೆತಕ್ಕೆ ತತ್ತರಿಸಿದ್ದಾರೆ. ಕಳೆದ ಹಲವು ವಾರಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ ಹೆಸರು, ಶೇಂಗಾ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಜಮೀನಿನಲ್ಲೇ ಒಣಗಿ ನಾಶವಾಗುತ್ತಿವೆ. ಇದರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಗದಗ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗದಗ ಜಿಲ್ಲೆಯ ರೋಣ, ಶಿರಹಟ್ಟಿ, ಮುಂಡರಗಿ, ನರಗುಂದ, ಗಜೇಂದ್ರಗಡ, ಲಕ್ಷ್ಮೇಶ್ವರ ಸೇರಿದಂತೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿ ಕಾಡುತ್ತಿದೆ. ಮುಂಗಾರು ಆರಂಭದಲ್ಲಿ ಸುರಿದ ಮಳೆಯಿಂದ ರೈತರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ವ್ಯಾಪಕವಾಗಿ ಬಿತ್ತನೆ ನಡೆಸಿದ್ದರು. ಆದರೆ ನಂತರ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಹೊಲಗಳಲ್ಲಿ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ಹಲವು ಕಡೆಗಳಲ್ಲಿ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರು ನಿರಾಶೆಯಿಂದ ಹೊಲಗಳತ್ತ ನೋಡುವಂತಾಗಿದೆ.

ಗದಗ ತಾಲೂಕಿನ ಗಂಗಿಮಡಿ ಪ್ರದೇಶದ ರೈತ ಶಿವಾನಂದ ಅವರು ಸುಮಾರು 40 ಎಕರೆ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆದಿದ್ದರು. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಅವರು ಬೀಜ, ಗೊಬ್ಬರ, ಔಷಧಿ, ಕಾರ್ಮಿಕ ವೆಚ್ಚ ಸೇರಿದಂತೆ ಪ್ರತಿ ಎಕರೆಗೆ ಸುಮಾರು ₹25 ಸಾವಿರದಿಂದ ₹35 ಸಾವಿರದವರೆಗೆ ಹೂಡಿಕೆ ಮಾಡಿದ್ದರು. ಆದರೆ ಮಳೆ ಕೊರತೆಯಿಂದ ಸಂಪೂರ್ಣ ಬೆಳೆ ಒಣಗಿ ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಈಗ ಮಳೆಯಾದರೂ ಯಾವುದೇ ಪ್ರಯೋಜನವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ತಕ್ಷಣ ಬರ ಘೋಷಣೆ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಶೇಕಡಾ 75ಕ್ಕೂ ಹೆಚ್ಚು ರೈತರು ಮುಂಗಾರು ಬಿತ್ತನೆ ಪೂರ್ಣಗೊಳಿಸಿದ್ದರು. ಆದರೆ ಮಳೆಯ ಕೊರತೆಯಿಂದ ಬಹುತೇಕ ಬೆಳೆಗಳು ಬೆಳವಣಿಗೆಯ ಹಂತದಲ್ಲೇ ಒಣಗಿ ಹೋಗಿವೆ. ಹೆಸರು, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಪ್ರಮುಖ ವಾಣಿಜ್ಯ ಹಾಗೂ ಆಹಾರ ಬೆಳೆಗಳು ನಾಶವಾಗುತ್ತಿರುವುದರಿಂದ ರೈತರಲ್ಲಿ ಆತಂಕ ಮನೆಮಾಡಿದೆ. ಕೃಷಿಗಾಗಿ ಪಡೆದ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ರೈತರು ಜಿಲ್ಲಾಡಳಿತದ ಕಾರ್ಯವೈಖರಿಯ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಬೆಳೆ ಹಾನಿ ವೀಕ್ಷಣೆಗೆ ಬಂದರೂ ಕೇವಲ ಔಪಚಾರಿಕ ಭೇಟಿ ನೀಡಿ ವಾಪಸ್ ತೆರಳುತ್ತಿದ್ದಾರೆ. ರೈತರ ಸಂಕಷ್ಟವನ್ನು ಸಮಗ್ರವಾಗಿ ಪರಿಶೀಲಿಸಿ ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸುವ ಕೆಲಸ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ರೈತ ಮುಖಂಡ ಗುರುನಾಥಗೌಡ ಹಾಗೂ ಶಂಕರ ಮಾತನಾಡಿ, ಬೆಳೆಗಾಗಿ ಮಾಡಿದ ಸಂಪೂರ್ಣ ಹೂಡಿಕೆ ನಷ್ಟವಾಗಿದೆ. ಈಗ ಉಳಿದಿರುವ ಒಣಗಿದ ಬೆಳೆಯನ್ನು ನಾಶ ಮಾಡಿ ಹಿಂಗಾರು ಹಂಗಾಮಿನ ಬಿತ್ತನೆಗೆ ಜಮೀನು ಸಿದ್ಧಪಡಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಬೆಳೆ ಹಾನಿಗೆ ಪರಿಹಾರ, ಬೆಳೆ ವಿಮೆ ಮೊತ್ತದ ತ್ವರಿತ ಬಿಡುಗಡೆ, ಕೃಷಿ ಸಾಲ ಮನ್ನಾ ಹಾಗೂ ರೈತರಿಗೆ ವಿಶೇಷ ಆರ್ಥಿಕ ನೆರವು ಘೋಷಿಸಬೇಕು ಎಂದು ಆಗ್ರಹಿಸಿದರು.

ಗದಗ ಜಿಲ್ಲೆಯಾದ್ಯಂತ ಮಳೆ ಕೊರತೆಯಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿಯನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಭವಿಷ್ಯದ ಬಗ್ಗೆ ಆತಂಕಗೊಂಡಿವೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬರದ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ನೆರವಿಗೆ ಧಾವಿಸಬೇಕೆಂದು ಅನ್ನದಾತರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande