ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ಅಮಿತ್ ಶಾ ಎಲ್ಜಿ, ಸಿಎಂ ಜತೆ ಮಾತುಕತೆ; ಕೇಂದ್ರದಿಂದ ನೆರವಿನ ಭರವಸೆ
ನವದೆಹಲಿ, 19 ಜುಲೈ (ಹಿ.ಸ.): ಆ್ಯಂಕರ್:ಜಮ್ಮು-ಕಾಶ್ಮೀರದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಉಪರಾಜ್ಯಪಾಲ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಪ್ರತ್ಯೇಕವಾಗಿ ದೂರವಾಣಿ ಮೂಲಕ ಮಾತುಕತೆ ನಡೆಸಿ
ಅಮಿತ್ ಶಾ ಸಂಗ್ರಹ ಚಿತ್ರ


ನವದೆಹಲಿ, 19 ಜುಲೈ (ಹಿ.ಸ.):

ಆ್ಯಂಕರ್:ಜಮ್ಮು-ಕಾಶ್ಮೀರದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಉಪರಾಜ್ಯಪಾಲ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಪ್ರತ್ಯೇಕವಾಗಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ಪಡೆದ ಅವರು, ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಅಮಿತ್ ಶಾ ಅವರು ಮಳೆಯಿಂದ ತೀವ್ರವಾಗಿ ಬಾಧಿತ ಪ್ರದೇಶಗಳ ಪರಿಸ್ಥಿತಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಹಾಗೂ ಆಡಳಿತದ ಸಿದ್ಧತೆಗಳ ಕುರಿತು ವಿವರವಾಗಿ ಮಾಹಿತಿ ಪಡೆದರು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಕೇಂದ್ರ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದ್ದು, ಅಗತ್ಯವಿರುವ ಎಲ್ಲ ನೆರವನ್ನು ತಕ್ಷಣವೇ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಮುಂಜಾನೆ ಜಮ್ಮು-ಕಾಶ್ಮೀರದ ಪುಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವು ಕಡೆಗಳಲ್ಲಿ ಹಠಾತ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದೆ. ಈ ದುರ್ಘಟನೆಗಳಲ್ಲಿ ಇದುವರೆಗೆ ಎಂಟು ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಇನ್ನೂ ಹಲವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಆಡಳಿತ, ಪೊಲೀಸ್, ವಿಪತ್ತು ನಿರ್ವಹಣಾ ಪಡೆ ಹಾಗೂ ಇತರ ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ತೊಡಗಿವೆ. ಹಲವೆಡೆ ರಸ್ತೆಗಳು ಹಾನಿಗೊಳಗಾಗಿದ್ದು, ಭೂಕುಸಿತದ ಮಣ್ಣಿನ ರಾಶಿಯಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಹಾಗೂ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಒದಗಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಪುಂಚ್, ರಾಜೌರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಕೆಲಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ, ನದಿ-ಹಳ್ಳಗಳು ಹಾಗೂ ಭೂಕುಸಿತ ಸಂಭವಿಸುವ ಪ್ರದೇಶಗಳಿಂದ ದೂರವಿರುವಂತೆ ಮತ್ತು ಸ್ಥಳೀಯ ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಆಡಳಿತವು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಇನ್ನಷ್ಟು ತ್ವರಿತಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande