ಬಾದಾಮಿ ಐತಿಹಾಸಿಕ ದೇವಸ್ಥಾನಗಳಿಗೆ ಸಚಿವ ಸೋಮಣ್ಣ ಭೇಟಿ
ಬಾಗಲಕೋಟೆ, 17 ಜುಲೈ (ಹಿ.ಸ.) ಆ್ಯಂಕರ್ : ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ಬಾದಾಮಿ ರೈಲು ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಶುಕ್ರವಾರ ಬಾದಾಮಿಗೆ ಆಗಮಿಸಿದರು. ಸಚಿವರನ್ನು ಸ್ಥಳೀಯ ಜನಪ್ರತಿನಿಧಿಗ
ರೈಲ್ವೆ ಕಾರ್ಯಕ್ರಮ


ಬಾಗಲಕೋಟೆ, 17 ಜುಲೈ (ಹಿ.ಸ.)

ಆ್ಯಂಕರ್ : ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ಬಾದಾಮಿ ರೈಲು ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಶುಕ್ರವಾರ ಬಾದಾಮಿಗೆ ಆಗಮಿಸಿದರು. ಸಚಿವರನ್ನು ಸ್ಥಳೀಯ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು.

ಬಾದಾಮಿ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸಚಿವ ವಿ. ಸೋಮಣ್ಣ ಅವರು ಮಾಜಿ ಶಾಸಕ ಮುರುಗೇಶ್ ನಿರಾಣಿ ಅವರೊಂದಿಗೆ ಬಾದಾಮಿ ಹಾಗೂ ಸುತ್ತಮುತ್ತಲಿನ ಪ್ರಸಿದ್ಧ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮೊದಲಿಗೆ ಅವರು ಶಕ್ತಿಪೀಠಗಳಲ್ಲಿ ಒಂದಾದ ಪ್ರಸಿದ್ಧ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ 'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ಮಹಾಕೂಟೇಶ್ವರ ದೇವಸ್ಥಾನಕ್ಕೆ ತೆರಳಿ ಶಿವನ ಆಶೀರ್ವಾದ ಪಡೆದರು. ನಂತರ ಶ್ರೀ ಹಾನಗಲ್ ಗುರು ಕುಮಾರೇಶ್ವರ ಗದ್ದುಗೆಯಿರುವ ಶಿವಯೋಗ ಮಂದಿರಕ್ಕೆ ಭೇಟಿ ನೀಡಿ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

ಇದಾದ ಬಳಿಕ ಯುನೆಸ್ಕೋ ವಿಶ್ವ ಪರಂಪರೆ ತಾಣಕ್ಕೆ ಸಮೀಪವಿರುವ ಐತಿಹಾಸಿಕ ಪಟ್ಟದಕಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಚನ್ನಕೇಶವ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಅಭಿವೃದ್ಧಿ, ರೈಲ್ವೆ ಮೂಲಸೌಕರ್ಯಗಳ ವಿಸ್ತರಣೆ ಹಾಗೂ ಜನರ ಸುಖ-ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಭೇಟಿ ವೇಳೆ ಬಾದಾಮಿ ಕ್ಷೇತ್ರದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಸಚಿವರಿಗೆ ಪರಿಚಯಿಸಲಾಯಿತು. ಅಮೃತ್ ಭಾರತ್ ಯೋಜನೆಯಡಿ ಬಾದಾಮಿ ರೈಲು ನಿಲ್ದಾಣದ ಪುನರಾಭಿವೃದ್ಧಿಯಿಂದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಸ್ಥಳೀಯ ಆರ್ಥಿಕತೆಗೆ ಹೊಸ ಚೈತನ್ಯ ದೊರೆಯಲಿದ್ದು, ಈ ಯೋಜನೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಗದ್ದಿಗೌಡರ್, ರಾಜ್ಯಸಭಾ ಸದಸ್ಯ ನಾರಾಯಣ ಸಾ. ಭಾಂಡಗೆ, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಂ.ಕೆ. ಪಟ್ಟಣಶೆಟ್ಟಿ, ಅರುಣ್ ಶಹಾಪೂರ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಗಣ್ಯರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande