
ನವದೆಹಲಿ, 11 ಜುಲೈ (ಹಿ.ಸ.):
ಆ್ಯಂಕರ್:
ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆ (ಸ್ಟ್ರಾಟೆಜಿಕ್ ಪಾರ್ಟ್ನರ್‌ಶಿಪ್) ಮಟ್ಟಕ್ಕೆ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿವೆ. 2030ರ ವೇಳೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 7 ಬಿಲಿಯನ್ ನ್ಯೂಜಿಲೆಂಡ್ ಡಾಲರ್‌ಗಳಿಗೆ (ಅಂದಾಜು ₹35 ಸಾವಿರ ಕೋಟಿ) ಹೆಚ್ಚಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
ಶನಿವಾರ ಆಕ್ಲೆಂಡ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ರೋಡ್‌ಮ್ಯಾಪ್ ಟು 2030ಗೆ ಅನುಮೋದನೆ ನೀಡಿದರು. ವಿದೇಶಾಂಗ ಸಚಿವಾಲಯದ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಉಭಯ ದೇಶಗಳ ಸಹಕಾರಕ್ಕೆ ಹೊಸ ದಿಕ್ಕು ನೀಡುವ ಮತ್ತು ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಸಮಗ್ರ ಕಾರ್ಯಯೋಜನೆಯಾಗಿ ಇದು ಕಾರ್ಯನಿರ್ವಹಿಸಲಿದೆ.
ಶೃಂಗಸಭೆಯ ಬಳಿಕ ಉಭಯ ರಾಷ್ಟ್ರಗಳ ಪ್ರಧಾನಿಗಳು ವಿವಿಧ ತಿಳಿವಳಿಕೆ ಒಪ್ಪಂದಗಳ ವಿನಿಮಯಕ್ಕೆ ಸಾಕ್ಷಿಯಾದರು. ನಂತರ ವಿದೇಶಾಂಗ ಸಚಿವಾಲಯ ಒಪ್ಪಂದಗಳು ಹಾಗೂ ಮಹತ್ವದ ಘೋಷಣೆಗಳ ವಿವರವನ್ನು ಪ್ರಕಟಿಸಿತು.
ಸಮುದ್ರ ಭದ್ರತಾ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಮುದ್ರ ಭದ್ರತಾ ಸಂವಾದ ಆರಂಭಿಸಲು ತೀರ್ಮಾನಿಸಲಾಗಿದೆ. ಜೊತೆಗೆ, ನ್ಯೂಜಿಲೆಂಡ್ ಇಂಡೋ-ಪೆಸಿಫಿಕ್ ಓಷನ್ಸ್ ಇನಿಶಿಯೇಟಿವ್ನ ಸಮುದ್ರ ಭದ್ರತಾ ವಿಭಾಗಕ್ಕೆ ಸೇರ್ಪಡೆಯಾಗಲಿದ್ದು, ಜಾಗತಿಕ ಜೈವ ಇಂಧನ ಒಕ್ಕೂಟದಲ್ಲೂ ಸದಸ್ಯತ್ವ ಪಡೆಯಲಿದೆ.
ಕೃಷಿ ಕ್ಷೇತ್ರದಲ್ಲಿ ಕಿವಿ ಹಣ್ಣು ಕಾರ್ಯಯೋಜನೆ ಆರಂಭಿಸಲಾಗುತ್ತದೆ. ಇದರ ಭಾಗವಾಗಿ ನಾಗಾಲ್ಯಾಂಡ್ ಮತ್ತು ಉತ್ತರಾಖಂಡದಲ್ಲಿ ಕಿವಿ ಹಣ್ಣಿನ ಉತ್ಪಾದನೆ ಹಾಗೂ ಸಂಶೋಧನೆಗೆ ಎರಡು ಅತ್ಯುನ್ನತ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಗೋವಾದ ರಾಷ್ಟ್ರೀಯ ಧ್ರುವೀಯ ಮತ್ತು ಸಮುದ್ರ ಸಂಶೋಧನಾ ಕೇಂದ್ರ ಹಾಗೂ ಕ್ಯಾಂಟರ್ಬರಿ ವಿಶ್ವವಿದ್ಯಾಲಯದ ನಡುವೆ ಅಂಟಾರ್ಕ್ಟಿಕಾ ಸಂಶೋಧನೆಗೆ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೇ ವೇಳೆ, ನಿಫ್ಟೆಮ್-ಕುಂಡ್ಲಿ ಮತ್ತು ಮ್ಯಾಸಿ ವಿಶ್ವವಿದ್ಯಾಲಯಗಳ ನಡುವೆ ಆಹಾರ ತಂತ್ರಜ್ಞಾನ, ಸಂಶೋಧನೆ, ವಿದ್ಯಾರ್ಥಿ ವಿನಿಮಯ ಹಾಗೂ ಶೈಕ್ಷಣಿಕ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದವೂ ನಡೆದಿದೆ.
ಉಭಯ ನಾಯಕರ ನಡುವಿನ ಮಾತುಕತೆಯಲ್ಲಿ ಒಟ್ಟು 18 ಒಪ್ಪಂದಗಳು ಮತ್ತು ಸಹಕಾರ ವ್ಯವಸ್ಥೆಗಳಿಗೆ ಒಪ್ಪಿಗೆ ನೀಡಲಾಗಿದೆ. ಅವುಗಳಲ್ಲಿ ರಕ್ಷಣೆ ಮತ್ತು ಸಮುದ್ರ ಭದ್ರತೆಗೆ ಸಂಬಂಧಿಸಿದ ನಾಲ್ಕು ಪ್ರಮುಖ ಒಪ್ಪಂದಗಳು ಸೇರಿವೆ. ಸಮುದ್ರ ಸಹಕಾರ, ಜಲಮಾಪನ ಮತ್ತು ನೌಕಾ ನಕ್ಷೆ ತಯಾರಿ, ಭಾರತೀಯ ನೌಕಾಪಡೆ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಯ ನಡುವಿನ ಪರಸ್ಪರ ಲಾಜಿಸ್ಟಿಕ್ ನೆರವು ಹಾಗೂ ಭಯೋತ್ಪಾದನೆ ವಿರೋಧಿ ಜಂಟಿ ಕಾರ್ಯಪಡೆ ರಚನೆ ಇವುಗಳಲ್ಲಿ ಪ್ರಮುಖವಾಗಿವೆ.
ಇದಲ್ಲದೆ, ವಿಪತ್ತು ನಿರ್ವಹಣೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಸಹಕಾರ ಕ್ಷೇತ್ರಗಳಲ್ಲಿಯೂ ಪ್ರತ್ಯೇಕ ಒಪ್ಪಂದಗಳು ನಡೆದಿವೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ–ನ್ಯೂಜಿಲೆಂಡ್ ಜಂಟಿ ಕಾರ್ಯಯೋಜನೆಗೂ ಅನುಮೋದನೆ ನೀಡಲಾಗಿದೆ.
ಗುಜರಾತ್‌ನ ಲೋಥಲ್‌ನಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಸಮುದ್ರ ಪರಂಪರೆ ಸಂಕೀರ್ಣದ ಅಭಿವೃದ್ಧಿಗೆ ನ್ಯೂಜಿಲೆಂಡ್ ಸಮುದ್ರ ವಸ್ತುಸಂಗ್ರಹಾಲಯದೊಂದಿಗೆ ಸಹಕಾರ ವ್ಯವಸ್ಥೆ ರೂಪಿಸಲಾಗಿದೆ. ಜೊತೆಗೆ, ಕಲೆ, ಪರಂಪರೆ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಮೂಲಕ ಉಭಯ ರಾಷ್ಟ್ರಗಳ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸಲು ಸಹ ಒಪ್ಪಂದ ಮಾಡಿಕೊಳ್ಳಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.