
ಗದಗ, 11 ಜುಲೈ (ಹಿ.ಸ.)
ಆ್ಯಂಕರ್:- ಹುಟ್ಟುಹಬ್ಬವನ್ನು ಕೇವಲ ಸಂಭ್ರಮದ ಆಚರಣೆಯಾಗಿ ಮಾತ್ರವಲ್ಲದೆ ಸಮಾಜಮುಖಿ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಸಂದೇಶ ಸಾರುವ ಕಾರ್ಯಕ್ರಮವೊಂದು ಗದಗದ ವಿಶ್ವ ಕಲ್ಯಾಣ (ರಿ) ಸಂಸ್ಥೆ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ನವಲೆ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸಿಕೊಂಡು, ಮಕ್ಕಳಿಗೆ ಸಿಹಿ ಹಾಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನಂತರ ವಿಶೇಷ ಅಗತ್ಯವುಳ್ಳ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಅವರಿಗೆ ಸಿಹಿ ಹಂಚಿ ಹಾಗೂ ಪ್ರೀತಿಯಿಂದ ಊಟ ಬಡಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು, ಪಾಲಕರು ಹಾಗೂ ಅತಿಥಿಗಳು ಸಂತಸದಿಂದ ಪಾಲ್ಗೊಂಡು ವಿಶೇಷ ಮಕ್ಕಳೊಂದಿಗೆ ಸಂಭ್ರಮವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯರಾದ ಪರಶುರಾಮ ನವಲೆ ಮಾತನಾಡಿ, ಸಮಾಜದಲ್ಲಿ ಅವಕಾಶವಂಚಿತ ವಿಶೇಷ ಮಕ್ಕಳಿಗೆ ಸೂಕ್ತ ಶಿಕ್ಷಣ, ತರಬೇತಿ ಹಾಗೂ ಪುನರ್ವಸತಿ ಕಲ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವಿಶ್ವ ಕಲ್ಯಾಣ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿದರು. ವಿಶೇಷ ಮಕ್ಕಳೊಂದಿಗೆ ತಮ್ಮ ಮಗ ರಾಘವೇಂದ್ರನ ಹುಟ್ಟುಹಬ್ಬ ಆಚರಿಸುತ್ತಿರುವುದು ಸ್ವರ್ಗದಲ್ಲಿ ಆಚರಿಸಿದಷ್ಟೇ ಸಂತೋಷವನ್ನು ನೀಡಿದೆ ಎಂದು ಭಾವುಕರಾಗಿ ನುಡಿದರು.
ಈ ಮಕ್ಕಳು ದೇವರ ಸ್ವರೂಪಿಗಳು. ಇವರ ಆಶೀರ್ವಾದದಿಂದ ನಮ್ಮ ಕುಟುಂಬದ ಕಷ್ಟಗಳು ದೂರವಾಗಿವೆ ಎಂಬ ನಂಬಿಕೆ ಇದೆ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೆ ನಮ್ಮ ಕುಟುಂಬದಿಂದ ನಿರಂತರ ಸಹಾಯ ನೀಡುವುದರ ಜೊತೆಗೆ ಇನ್ನಷ್ಟು ದಾನಿಗಳನ್ನು ಪ್ರೇರೇಪಿಸಿ ಸಹಕಾರ ದೊರಕಿಸುವ ಪ್ರಯತ್ನ ಮಾಡುತ್ತೇವೆ ಎಂದು ಪರಶುರಾಮ ನವಲೆ ತಿಳಿಸಿದರು.
ಹುಟ್ಟುಹಬ್ಬದ ಸಂಭ್ರಮದ ಕೇಂದ್ರಬಿಂದುವಾಗಿದ್ದ ರಾಘವೇಂದ್ರ ನವಲೆ ಮಾತನಾಡಿ, ದೇವರು ದೇವಸ್ಥಾನಗಳಲ್ಲಿ ಮಾತ್ರವಲ್ಲ, ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿಯೂ ನೆಲೆಸಿದ್ದಾನೆ ಎಂಬ ಭಾವನೆ ವ್ಯಕ್ತಪಡಿಸಿದರು. ದಿವ್ಯಾಂಗರಲ್ಲಿ ಅಪಾರವಾದ ಪ್ರತಿಭೆ ಮತ್ತು ಶಕ್ತಿ ಅಡಗಿದೆ. ಅವರಿಗೆ ವೈಜ್ಞಾನಿಕ ಶಿಕ್ಷಣ ಹಾಗೂ ಕೌಶಲ್ಯಾಧಾರಿತ ತರಬೇತಿ ನೀಡಿದರೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಕಾರ್ಯದಲ್ಲಿ ವಿಶ್ವ ಕಲ್ಯಾಣ ಸಂಸ್ಥೆ ತೊಡಗಿರುವುದು ದೇವರು ಮೆಚ್ಚುವಂತಹ ಸೇವೆಯಾಗಿದೆ. ಈ ಸೇವಾ ಕಾರ್ಯಕ್ಕೆ ಮುಂದೆಯೂ ನನ್ನಿಂದ ಸಾಧ್ಯವಾದ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಕೆ. ಶಹಾ, ತಾರಾ ನವಲೆ, ಭಾಗ್ಯಶ್ರೀ ನವಲೆ, ವೈಷ್ಣವಿ ನವಲೆ, ಮಂಗಳಾ ಬೆಲೇರಿ, ಸುಜಾತಾ ದಂಡಿನ ಹಾಗೂ ರತ್ನಾ ನಂದಿಕೋಲಮಠ ಮಾತನಾಡಿ, ವಿಶೇಷ ಮಕ್ಕಳಿಗೆ ತಾಳ್ಮೆ, ಪ್ರೀತಿ ಮತ್ತು ಸಮರ್ಪಣಾ ಮನೋಭಾವದಿಂದ ಶಿಕ್ಷಣ ಹಾಗೂ ತರಬೇತಿ ನೀಡುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಸಂಸ್ಥೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ-ಸಹಕಾರ ನೀಡಬೇಕೆಂದು ಕರೆ ನೀಡಿದರು.
ಸನಾತನ ಸಚ್ಚಿದಾನಂದ ಪರಮಾರ್ಥ ಟ್ರಸ್ಟ್ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯಲಾಯಿತು. ಮಕ್ಕಳಿಗೆ ಸಿಹಿ ಹಾಗೂ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದ್ದು, ಅತಿಥಿಗಳು ಸ್ವತಃ ಮಕ್ಕಳಿಗೆ ಊಟ ಬಡಿಸಿ ಮಾನವೀಯತೆ ಮೆರೆದರು. ಕಾರ್ಯಕ್ರಮದ ಈ ದೃಶ್ಯಗಳು ಎಲ್ಲರ ಮನಸ್ಸಿಗೆ ಮುದ ನೀಡಿದವು.
ಕಾರ್ಯಕ್ರಮದಲ್ಲಿ ಗಗನ ರಡ್ಡೇರ, ವಿಶೇಷ ಸಿಬ್ಬಂದಿ ಪ್ರಭಾವತಿ ರಡ್ಡೇರ, ನಜುಂಡ, ಶಂಕ್ರಮ್ಮ, ಶಾಂತಮ್ಮ, ಶಾಲೆಯ ಸಿಬ್ಬಂದಿ, ವಿಶೇಷ ಮಕ್ಕಳು, ಪಾಲಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಮಕ್ಕಳೊಂದಿಗೆ ಸಂಭ್ರಮ ಹಂಚಿಕೊಂಡ ಈ ಹುಟ್ಟುಹಬ್ಬ ಸಮಾಜಸೇವೆಯ ನೈಜ ಸಂದೇಶ ಸಾರುವ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP