
ಗದಗ, 30 ಜೂನ್ (ಹಿ.ಸ.) :
ಆ್ಯಂಕರ್ : ಮತದಾರರ ಪಟ್ಟಿಯನ್ನು ನಿಖರ, ದೋಷರಹಿತ ಹಾಗೂ ಪಾರದರ್ಶಕವಾಗಿಸುವ ಉದ್ದೇಶದಿಂದ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಪಾಲ್ಗೊಂಡು ಚುನಾವಣಾ ಆಯೋಗದ ಮಹತ್ವದ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.
ಗದಗ ನಗರದ ಪ್ರಸಿದ್ಧ ತ್ರಿವಿಧ ದಾಸೋಹ ಮಠವಾದ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಕಲ್ಲಯ್ಯಜ್ಜನವರಿಗೆ ಎಸ್ಐಆರ್ ಎನ್ಯೂಮರೇಶನ್ ನಮೂನೆ ವಿತರಿಸುವ ಮೂಲಕ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮನೆ-ಮನೆ ಭೇಟಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಐಆರ್ ಪ್ರಕ್ರಿಯೆಯ ಉದ್ದೇಶ, ಮಹತ್ವ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಯಲ್ಲಿನ ಮಾಹಿತಿಯನ್ನು ನಿಖರಗೊಳಿಸುವುದು, ಅರ್ಹ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡುವುದು, ಮರಣ ಹೊಂದಿದವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕುವುದು, ಪುನರಾವರ್ತಿತ ಹೆಸರುಗಳನ್ನು ತಿದ್ದುಪಡಿ ಮಾಡುವುದು ಮತ್ತು ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಷ್ಕರಣೆ ನಡೆಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯೇ ಚುನಾವಣೆಗಳ ಮೂಲಾಧಾರವಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ಹೆಸರು, ವಿಳಾಸ ಹಾಗೂ ಇತರ ಮಾಹಿತಿಯನ್ನು ಪರಿಶೀಲಿಸಿಕೊಂಡು ಯಾವುದೇ ತಪ್ಪುಗಳಿದ್ದಲ್ಲಿ ಎಸ್ಐಆರ್ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಇದರಿಂದ ವಿಶ್ವಾಸಾರ್ಹ ಹಾಗೂ ಪಾರದರ್ಶಕ ಮತದಾರರ ಪಟ್ಟಿ ಸಿದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಧಾರ್ಮಿಕ ಮುಖಂಡರು, ಸಾಮಾಜಿಕ ಸಂಘಟನೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಎಸ್ಐಆರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯಾವುದೇ ಗೊಂದಲ ಅಥವಾ ವದಂತಿಗಳಿಗೆ ಕಿವಿಗೊಡದೆ ಚುನಾವಣಾ ಆಯೋಗದ ನಿರ್ದೇಶನದಂತೆ ಸಾರ್ವಜನಿಕರು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಜಿಲ್ಲೆಯಾದ್ಯಂತ ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುವ ಕಾರ್ಯ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಪ್ರಮುಖ ಪಾತ್ರವಹಿಸಬೇಕು ಎಂದು ಮನವಿ ಮಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಬಿಎಲ್ಒಗಳು ಈಗಾಗಲೇ ಮನೆ-ಮನೆಗೆ ಭೇಟಿ ನೀಡಿ ಶೇ.94ಕ್ಕೂ ಅಧಿಕ ನೈಜ ಮತದಾರರನ್ನು ಗುರುತಿಸಿದ್ದು, ಕುಟುಂಬಗಳ ಲಿಂಕೇಜ್ ಮಾಹಿತಿಯೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
ಮನೆ-ಮನೆ ಸಮೀಕ್ಷೆ ಪೂರ್ಣಗೊಂಡ ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ಸಾರ್ವಜನಿಕರಿಗೆ ಎರಡು ತಿಂಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅಕ್ಟೋಬರ್ 3ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು, ಅವುಗಳ ಪರಿಶೀಲನೆ ಹಾಗೂ ಇತ್ಯರ್ಥದ ಬಳಿಕ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಂತರ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಮತದಾರರ ಪಟ್ಟಿಗಳು ರದ್ದಾಗಲಿದ್ದು, ಪರಿಷ್ಕೃತ ಮತದಾರರ ಪಟ್ಟಿಯೇ ಅಧಿಕೃತವಾಗಿ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆಗೆ ಅವಕಾಶ
2002ರ ಮತದಾರರ ಪಟ್ಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಇದ್ದಲ್ಲಿ ಕುಟುಂಬದ ಹೊಸದಾಗಿ ಅರ್ಹತೆ ಪಡೆದ ಸದಸ್ಯರ ಹೆಸರುಗಳನ್ನು ಸುಲಭವಾಗಿ ಸೇರ್ಪಡೆ ಮಾಡಬಹುದು. ಮದುವೆಯಾಗಿ ಅಥವಾ ಬೇರೆ ಊರಿನಿಂದ ವಲಸೆ ಬಂದು ನೆಲೆಸಿರುವವರ ಹೆಸರು ಹಳೆಯ ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ಹಿಂದೆ ವಾಸಿಸುತ್ತಿದ್ದ ಸ್ಥಳದ ಮತದಾರರ ಪಟ್ಟಿಯ ಆಧಾರದ ಮೇಲೆ ಹೆಸರು ಸೇರಿಸಿಕೊಳ್ಳಬಹುದು.
ಮ್ಯಾಪಿಂಗ್ ಆಗದೆ ಇರುವವರು ಮನೆ ಗಣತಿ ನಮೂನೆಯೊಂದಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳಾದ ಸರ್ಕಾರಿ ಗುರುತಿನ ಚೀಟಿ, ಪಿಂಚಣಿ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಎಸ್ಎಸ್ಎಲ್ಸಿ ಪ್ರಮಾಣಪತ್ರ, ಶಾಶ್ವತ ನಿವಾಸ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಕುಟುಂಬ ನೋಂದಣಿ, ಅರಣ್ಯ ಹಕ್ಕು ಪತ್ರ, ಭೂಮಿ ಅಥವಾ ಮನೆ ಹಂಚಿಕೆ ದಾಖಲೆ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸಬಹುದು. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಶೀಲ್ದಾರ್ ಶ್ರೀನಿವಾಸ ಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಎಲ್ಒಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಚುನಾವಣಾ ಆಯೋಗದ ಈ ಮಹತ್ವದ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಸಮಾಜದ ಎಲ್ಲ ವರ್ಗದ ಜನರು ತಮ್ಮ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಎಸ್ಐಆರ್ ಪ್ರಕ್ರಿಯೆಯ ಯಶಸ್ಸಿಗೆ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯವಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / lalita MP