


ಕೊಪ್ಪಳ, 30 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಜೂನ್ 30ರಂದು ಹಳೆಯ ಕೊಪ್ಪಳದ ಕೋಟೆ ಪ್ರದೇಶದ ನಿವಾಸಿ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಸುಮಂತರಾವ್ ಪಟವಾರಿ ಅವರ ಮನೆಗೆ ಭೇಟಿ ನೀಡಿ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯ ಗಣತಿ ನಮೂನೆಯನ್ನು ವಿತರಿಸಿದರು.
ಮಿಟ್ಟಿಕೇರಿ ವಾರ್ಡ ನಂಬರ್ 06ರ ಭಾಗ ಸಂಖ್ಯೆ 106ರ ಮತದಾರರ ಪಟ್ಟಿಯಲ್ಲಿರುವ 95ರ ವಯೋಮಾದ ಹಿರಿಯರಾದ ಸುಮಂತರಾವ್ ಅವರ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ ಅವರೊಂದಿಗೆ ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿಗಳು ಮೊದಲಿಗೆ, ತಲೆಗೆ ಟವೆಲ್ ಧರಿಸಿ ಆಸೀನರಾಗಿದ್ದ ಸುಮಂತರಾವ್ ಅವರ ಆರೋಗ್ಯ, ಯೋಗಕ್ಷೇಮದ ಬಗ್ಗೆ ವಿಚಾರಿಸಿದರು.
ಬಳಿಕ ಗಣತಿ ನಮೂನೆ ನೀಡಿದರು. ಎಸ್ ಆರ್ ಪಟವಾರಿ ಎಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಸುಮಂತರಾವ್ ಅವರು ಗಣತಿ ನಮೂನೆ ಮೇಲೆ ಸಹಿ ಮಾಡಿ ಗಮನ ಸೆಳೆದರು.
ಈ ವೇಳೆ ತಹಸೀಲ್ದಾರ ಬಸವರಾಜ ತನ್ನಳ್ಳಿ, ಸುಮಂತರಾವ್ ಅವರ ಪುತ್ರ ವಾಸುದೇವ ಕುಲಕರ್ಣಿ (ಪಟವಾರಿ), ಮೊಮ್ಮಗ ಕಿರಣಕುಮಾರ ಕುಲಕರ್ಣಿ (ಪಟವಾರಿ), ಬಿಎಲ್ಓ ಪಾತಿಮಾ ಬೇಗಂ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್