ಮಗುವಿಗೂ ತಪ್ಪದೆ ಪೋಲಿಯೊ ಲಸಿಕೆ ಹಾಕಿಸಿ : ಪ್ರೊ. ಎಸ್.ವಿ. ಸಂಕನೂರ
ಗದಗ, 28 ಜೂನ್ (ಹಿ.ಸ.) : ಆ್ಯಂಕರ್ : ಪೋಲಿಯೊ ಮುಕ್ತ ಭಾರತ ನಿರ್ಮಾಣದ ಸಂಕಲ್ಪವನ್ನು ಯಶಸ್ವಿಗೊಳಿಸಲು ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೆ ಪೋಲಿಯೊ ಲಸಿಕೆ ಹಾಕಿಸುವಂತೆ ವಿಧಾನ ಪರಿಷತ್ ಶಾಸಕ ಪ್ರೊ. ಎಸ್.ವಿ. ಸಂಕನೂರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಗದಗ ನಗರದ ಎಂಸಿಎಚ್ ಆಸ್ಪ
ಫೋಟೋ


ಗದಗ, 28 ಜೂನ್ (ಹಿ.ಸ.) :

ಆ್ಯಂಕರ್ : ಪೋಲಿಯೊ ಮುಕ್ತ ಭಾರತ ನಿರ್ಮಾಣದ ಸಂಕಲ್ಪವನ್ನು ಯಶಸ್ವಿಗೊಳಿಸಲು ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೆ ಪೋಲಿಯೊ ಲಸಿಕೆ ಹಾಕಿಸುವಂತೆ ವಿಧಾನ ಪರಿಷತ್ ಶಾಸಕ ಪ್ರೊ. ಎಸ್.ವಿ. ಸಂಕನೂರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗದಗ ನಗರದ ಎಂಸಿಎಚ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪೋಲಿಯೊ ಎಂಬುದು ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟುಮಾಡುವ ಗಂಭೀರ ವೈರಾಣುಜನ್ಯ ಕಾಯಿಲೆಯಾಗಿದ್ದು, ಅದರ ವಿರುದ್ಧದ ಅತ್ಯಂತ ಪರಿಣಾಮಕಾರಿ ರಕ್ಷಣೆಯೇ ಪೋಲಿಯೊ ಲಸಿಕೆ ಎಂದು ತಿಳಿಸಿದರು.

ದೇಶದಲ್ಲಿ ಪೋಲಿಯೊ ನಿರ್ಮೂಲನೆ ಸಾಧನೆಯಾಗಿದ್ದರೂ, ಈ ಸಾಧನೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಪ್ರತಿಯೊಂದು ಲಸಿಕಾ ಸುತ್ತಿನಲ್ಲೂ ಯಾವುದೇ ಮಗು ವಂಚಿತವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.

ಸರ್ಕಾರವು ಮಕ್ಕಳ ಆರೋಗ್ಯ ರಕ್ಷಣೆಗಾಗಿ ಉಚಿತವಾಗಿ ಪೋಲಿಯೊ ಲಸಿಕೆಯನ್ನು ನೀಡುತ್ತಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ-ಮನೆಗೆ ತೆರಳಿ ಹಾಗೂ ವಿವಿಧ ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದು, ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಪೋಲಿಯೊ ನಿರ್ಮೂಲನೆಗೆ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹ ಇಲಾಖೆಯೊಂದಿಗೆ ಕೈಜೋಡಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಶಾಸಕ ಎಸ್ ವಿ ಸಂಕನೂರ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ ವಿವಿಧ ಲಸಿಕಾ ಕೇಂದ್ರಗಳಲ್ಲಿ ಪೋಲಿಯೊ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಪಡೆಯದೆ ಉಳಿದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವೂ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರೆಗೌಡ್ರ, ಜಿಲ್ಲಾ ನೋಡಲ್ ಅಧಿಕಾರಿ ಡಾ. ಶಿವಕುಮಾರ ಮಾನಕರ, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande