ರೈತರ ಭೂಮಿ–ವಕ್ಫ್ ವಿವಾದ ; ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ವಿದ್ಯಮಾನ
ಅಶೋಕ


ಬೆಂಗಳೂರು, 28 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ರೈತರ ಭೂಮಿಗೆ ಸಂಬಂಧಿಸಿದಂತೆ ವಕ್ಫ್ ಉಲ್ಲೇಖಗಳು ಆರ್ಟಿಸಿ ದಾಖಲೆಗಳಲ್ಲಿ ಸೇರ್ಪಡೆಯಾಗುತ್ತಿರುವ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ರಾಜ್ಯದಾದ್ಯಂತ ರೈತರ ಆರ್ಟಿಸಿಗಳ ಕಾಲಂ–11ರಲ್ಲಿ ವಕ್ಫ್ ಉಲ್ಲೇಖಗಳನ್ನು ದಾಖಲಿಸಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿದ್ದು, ಇದರಿಂದ ಲಕ್ಷಾಂತರ ರೈತರಲ್ಲಿ ಆತಂಕ ಉಂಟಾಗಿದೆ ಎಂದು ಹೇಳಿದ್ದಾರೆ.

ಈ ವಿದ್ಯಮಾನ ಕೇವಲ ದಾಖಲೆ ಬದಲಾವಣೆಯ ವಿಷಯವಲ್ಲ; ರೈತರ ಮಾಲೀಕತ್ವದ ಹಕ್ಕು, ಬದುಕು ಹಾಗೂ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೇಳಿಕೆಯ ಪ್ರಕಾರ, ಈಗಾಗಲೇ 1.80 ಲಕ್ಷಕ್ಕೂ ಹೆಚ್ಚು ರೈತರ ಆರ್ಟಿಸಿಗಳಲ್ಲಿ ವಕ್ಫ್ ಉಲ್ಲೇಖ ದಾಖಲಾಗಿದ್ದು, ಒಟ್ಟು 3 ಲಕ್ಷ ಆರ್ಟಿಸಿಗಳನ್ನು ಈ ಪ್ರಕ್ರಿಯೆಯ ವ್ಯಾಪ್ತಿಗೆ ತರಲು ಕ್ರಮ ನಡೆಯುತ್ತಿದೆ ಎನ್ನಲಾಗಿದೆ. ರಾಜ್ಯದ 31 ಜಿಲ್ಲೆಗಳ ರೈತರು ಇದರ ಪರಿಣಾಮ ಎದುರಿಸುವ ಆತಂಕದಲ್ಲಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಜಿಲ್ಲಾವಾರು ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, ಉತ್ತರ ಕನ್ನಡದಲ್ಲಿ 73 ಸಾವಿರ, ದಕ್ಷಿಣ ಕನ್ನಡದಲ್ಲಿ 48 ಸಾವಿರ, ಶಿವಮೊಗ್ಗದಲ್ಲಿ 38 ಸಾವಿರ, ಬೆಂಗಳೂರು ದಕ್ಷಿಣದಲ್ಲಿ 18 ಸಾವಿರ ಹಾಗೂ ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ತಲಾ 17 ಸಾವಿರ ಆರ್ಟಿಸಿಗಳು ಈ ಪ್ರಕ್ರಿಯೆಗೆ ಒಳಪಟ್ಟಿವೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿರುವ ಆರ್. ಅಶೋಕ್, ವರದಿಗಳು ತಪ್ಪಾಗಿದ್ದರೆ ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕು. ವರದಿಗಳು ಸತ್ಯವಾಗಿದ್ದರೆ, ರೈತರ ಆರ್ಟಿಸಿಗಳಲ್ಲಿ ಈ ರೀತಿಯ ಉಲ್ಲೇಖಗಳು ಹೇಗೆ ದಾಖಲಾಗಿವೆ ಎಂಬುದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರು ತಮ್ಮದೇ ಭೂಮಿಯನ್ನು ಮಾರಾಟ ಮಾಡಲು, ಬ್ಯಾಂಕ್ ಸಾಲ ಪಡೆಯಲು ಅಥವಾ ಮಾಲೀಕತ್ವದ ಹಕ್ಕು ಚಲಾಯಿಸಲು ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಅವರು, ರೈತರನ್ನು ತಮ್ಮದೇ ಜಮೀನಿನಲ್ಲಿ ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ಈ ಸಂಪೂರ್ಣ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಿ, ರೈತರ ಆರ್ಟಿಸಿಗಳಲ್ಲಿರುವ ಎಲ್ಲಾ ವಿವಾದಾತ್ಮಕ ಉಲ್ಲೇಖಗಳನ್ನು ಮರುಪರಿಶೀಲಿಸಬೇಕು. ಜೊತೆಗೆ, ಈ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೈತರ ಭೂಮಿಯ ಹಕ್ಕಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ರೈತರ ಹಕ್ಕು ರಕ್ಷಿಸಲು ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಆರ್. ಅಶೋಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande