
ನವದೆಹಲಿ, 27 ಜೂನ್ (ಹಿ.ಸ.) :
ಆ್ಯಂಕರ್ : ಡೈಜೆಸ್ಟಿವ್ ಬಿಸ್ಕತ್ ಕುರಿತು ಗ್ರಾಹಕರನ್ನು ದಾರಿ ತಪ್ಪಿಸುವ ರೀತಿಯ ಜಾಹೀರಾತು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಎಸ್ಎಜೆ ಫುಡ್ ಪ್ರಾಡಕ್ಟ್ಸ್ ಸಂಸ್ಥೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೋಟಿಸ್ ಜಾರಿಗೊಳಿಸಿದೆ.
ಗ್ರಾಹಕರೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಂಸ್ಥೆಯು ಏಳು ದಿನಗಳೊಳಗೆ ತನ್ನ ಸ್ಪಷ್ಟೀಕರಣವನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಪ್ರಾಧಿಕಾರವು ನೀಡಿರುವ ನೋಟಿಸ್ನಲ್ಲಿ, ಸಂಸ್ಥೆಯ ಈಟ್ ಫಿಟ್ ಡೈಜೆಸ್ಟಿವ್ ಬಿಸ್ಕತ್ ಉತ್ಪನ್ನದ ಕುರಿತು ಮಾಡಿರುವ ಹಲವು ಜಾಹೀರಾತುಗಳು ವಾಸ್ತವಾಂಶಗಳಿಗೆ ಹೊಂದಿಕೆಯಾಗಿಲ್ಲ ಎಂದು ತಿಳಿಸಿದೆ.
ಸಂಸ್ಥೆಯು ತನ್ನ ಉತ್ಪನ್ನದಲ್ಲಿ ಸಕ್ಕರೆ ಇಲ್ಲ ಎಂದು ಹೇಳಿಕೊಂಡಿದ್ದರೂ, ಉತ್ಪನ್ನದಲ್ಲಿ ಘನ ಗ್ಲೂಕೋಸ್ ಪಾಕ ಹಾಗೂ ಮಾಲ್ಟೊಡೆಕ್ಸ್ಟ್ರಿನ್ ಅಂಶಗಳನ್ನು ಬಳಸಲಾಗಿದೆ ಎಂದು ಪ್ರಾಧಿಕಾರ ಉಲ್ಲೇಖಿಸಿದೆ. ಇದೇ ವೇಳೆ, ಬಿಸ್ಕತ್ ನೂರಕ್ಕೆ ನೂರು ಗೋಧಿ ಹಿಟ್ಟಿನಿಂದ ತಯಾರಿಸಲಾಗಿದೆ ಎಂದು ಜಾಹೀರಾತು ನೀಡಿದ್ದರೂ, ಉತ್ಪನ್ನದಲ್ಲಿ ವಾಸ್ತವವಾಗಿ ಶೇ. 72ರಷ್ಟು ಮಾತ್ರ ಗೋಧಿ ಹಿಟ್ಟು ಬಳಕೆಯಾಗಿದೆ ಎಂದು ತಿಳಿಸಿದೆ.
ಈ ಆರೋಪಗಳ ಕುರಿತು ಸಂಸ್ಥೆಯು ಏಳು ದಿನಗಳೊಳಗೆ ಸಮರ್ಪಕ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಅದರ ಉತ್ತರವನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಆಹಾರ ಉತ್ಪನ್ನಗಳ ಕುರಿತು ಗ್ರಾಹಕರಿಗೆ ನಿಖರ ಮತ್ತು ಸತ್ಯವಾದ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ತಪ್ಪು ಅಥವಾ ದಾರಿತಪ್ಪಿಸುವ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಗೊಂದಲಕ್ಕೀಡು ಮಾಡುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಸಂಸ್ಥೆಯ ಉತ್ತರದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ನಿರ್ಧರಿಸಲಾಗುವುದು.
ಹಿಂದೂಸ್ತಾನ್ ಸಮಾಚಾರ್ / Rakesh.M.B.