ಬೆಳಗಾವಿಯಲ್ಲಿ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಲೋಕಾರ್ಪಣೆ
ಬೆಳಗಾವಿ, 21 ಜೂನ್ (ಹಿ.ಸ.): ಆ್ಯಂಕರ್: ಜನಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಸ್ಮಾರಕ ಭವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಲೋಕಾರ್ಪಣೆಗೊಳಿಸಿದರು. ನಗರದ ನ್ಯೂ ಗುಡ್‌ಶೆಡ್ ರಸ್ತೆಯಲ್ಲಿರುವ ಸಂಘ ಸದನದಲ್ಲಿ ನ
Inauguration


ಬೆಳಗಾವಿ, 21 ಜೂನ್ (ಹಿ.ಸ.):

ಆ್ಯಂಕರ್:

ಜನಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಸ್ಮಾರಕ ಭವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಲೋಕಾರ್ಪಣೆಗೊಳಿಸಿದರು. ನಗರದ ನ್ಯೂ ಗುಡ್‌ಶೆಡ್ ರಸ್ತೆಯಲ್ಲಿರುವ ಸಂಘ ಸದನದಲ್ಲಿ ನಡೆದ ಸಮಾರಂಭವು ಗಣ್ಯರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ಬೆಳಗಾವಿ ಕಾರಂಜಿ ಮಠದ ಪ.ಪೂ. ಶ್ರೀ ಗುರುಸಿದ್ಧ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ಸ್ಮಾರಕ ಭವನವನ್ನು ಉದ್ಘಾಟಿಸಿದರು.

1920ರ ಜೂನ್ 23ರಂದು ಅಂದಿನ ಧಾರವಾಡ ಜಿಲ್ಲೆಯ ನರಗುಂದದಲ್ಲಿ ಜನಿಸಿದ ಜಗನ್ನಾಥರಾವ್ ಜೋಶಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿ, ಭಾರತೀಯ ಜನಸಂಘ ಹಾಗೂ ಬಳಿಕ ಭಾರತೀಯ ಜನತಾ ಪಕ್ಷದ ಪ್ರಮುಖ ಸಂಘಟಕರಾಗಿ ಗುರುತಿಸಿಕೊಂಡಿದ್ದರು. ಪ್ರಖರ ವಾಗ್ಮಿತ್ವ, ಸರಳ ಜೀವನ, ತ್ಯಾಗ ಮತ್ತು ಅದ್ಭುತ ಸಂಘಟನಾ ಸಾಮರ್ಥ್ಯದಿಂದ ಅವರು “ಕರ್ನಾಟಕ ಕೇಸರಿ” ಎಂಬ ಬಿರುದಿಗೆ ಪಾತ್ರರಾಗಿದ್ದರು.

ಗೋವಾ ವಿಮೋಚನಾ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಜೋಶಿ ಅವರು, ಪೋರ್ಚುಗೀಸರ ಆಡಳಿತದಿಂದ ಗೋವಾವನ್ನು ಮುಕ್ತಗೊಳಿಸುವ ಚಳವಳಿಗೆ ಸಾವಿರಾರು ಕಾರ್ಯಕರ್ತರನ್ನು ಸಂಘಟಿಸಿ ಮುನ್ನಡೆಸಿದ್ದರು. ಮಧ್ಯಪ್ರದೇಶದ ಭೋಪಾಲ್ ಮತ್ತು ಶಾಜಾಪುರ ಲೋಕಸಭಾ ಕ್ಷೇತ್ರಗಳಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು, ನಂತರ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ರಾಷ್ಟ್ರಸೇವೆ, ತ್ಯಾಗ, ಸಂಘಟನಾ ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದ ಜಗನ್ನಾಥರಾವ್ ಜೋಶಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಜನಕಲ್ಯಾಣ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ಥ ಅರವಿಂದರಾವ್ ದೇಶಪಾಂಡೆ ಸೇರಿದಂತೆ ಮಾಜಿ ಸಚಿವರು, ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande