
ಬೆಂಗಳೂರು, 20 ಜೂನ್ (ಹಿ.ಸ.) :
ಆ್ಯಂಕರ್ : ನಟ ಸತೀಶ್ ನಿನಾಸಂ ಅವರ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ಕನ್ನಡ ಚಿತ್ರ ಅಯೋಗ್ಯ 2 ಚಿತ್ರದ ಮೊದಲ ರೊಮ್ಯಾಂಟಿಕ್ ಹಾಡು ‘ಪುಟ್ ಲಕ್ಷ್ಮೀ’ ಬಿಡುಗಡೆಗೊಂಡಿದೆ. ಈಗಾಗಲೇ ಹಿಟ್ ಜೋಡಿಯಾಗಿ ಗುರುತಿಸಿಕೊಂಡಿರುವ ರಚಿತಾ ರಾಮ್ ಮತ್ತು ಸತೀಶ್ ನಿನಾಸಂ ಮತ್ತೊಮ್ಮೆ ‘ಅಯೋಗ್ಯ 2’ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಚಿತ್ರದ ಪ್ರಚಾರ ಕಾರ್ಯಕ್ಕೆ ಹಾಡಿನ ಬಿಡುಗಡೆ ಮೂಲಕ ಅಧಿಕೃತ ಚಾಲನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಇಂದು ಚಿತ್ರದ ಮೊದಲ ಹಾಡನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬಿಡುಗಡೆ ಮಾಡಿ ಮಾತನಾಡಿದರು. “ನನ್ನ 22 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಒಂದು ಹಾಡನ್ನು ಅತಿಥಿಯಾಗಿ ಬಿಡುಗಡೆ ಮಾಡುತ್ತಿದ್ದೇನೆ. ಹಾಡುಗಾರ ಪೃಥ್ವಿ ಭಟ್ ಅದ್ಭುತವಾಗಿ ಹಾಡಿದ್ದಾರೆ. ಎಂಟು ವರ್ಷಗಳ ಹಿಂದೆ ‘ಅಯೋಗ್ಯ’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದ ದಿನಗಳು ಈಗ ನೆನಪಾಗುತ್ತಿವೆ” ಎಂದು ಹೇಳಿದರು.
ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಾಸ್ತಿ ಮಾತನಾಡಿ, ‘ಅಯೋಗ್ಯ 2’ ಚಿತ್ರದ ಸಂಭಾಷಣೆಗಳು ಅತ್ಯುತ್ತಮವಾಗಿ ಮೂಡಿಬಂದಿದ್ದು, ಈ ತಂಡದೊಂದಿಗೆ ಕೆಲಸ ಮಾಡಿರುವುದು ಸಂತಸದ ಅನುಭವ ಎಂದು ತಿಳಿಸಿದರು.
ಚಿತ್ರದಲ್ಲಿ ನಟಿಸಿರುವ ಶಿವರಾಜ್ ಕೆ.ಆರ್. ಪೇಟೆ, ಮಂಜು ಪಾವಗಡ ಹಾಗೂ ಕಿರಣ್ ನಾಯ್ಕ್ ಮಾತನಾಡಿ, ‘ಅಯೋಗ್ಯ 2’ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ಹೆಚ್ಚಿನ ಕಲಾವಿದರು ಇದ್ದು, ಮನರಂಜನೆಯ ಅಂಶವೂ ಹೆಚ್ಚಿರಲಿದೆ ಎಂದು ಹೇಳಿದರು.
ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, “ಎಂಟು ವರ್ಷಗಳ ಬಳಿಕ ‘ಅಯೋಗ್ಯ’ ತಂಡ ಮತ್ತೆ ಒಂದಾಗಿದೆ. ಈ ಹಾಡು ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ. ಮೊದಲ ಭಾಗಕ್ಕಿಂತಲೂ ‘ಅಯೋಗ್ಯ 2’ಯಲ್ಲಿ ಹೆಚ್ಚು ಮನರಂಜನೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸತೀಶ್ ನಿನಾಸಂ ಮತ್ತು ರಚಿತಾ ರಾಮ್, ಹಾಡಿಗೆ ಸಾಹಿತ್ಯ ಬರೆದ ಚೇತನ್ ಕುಮಾರ್ ಹಾಗೂ ಹಾಡಿದ ಸಿದ್ ಶ್ರೀರಾಮ್ ಮತ್ತು ಪೃಥ್ವಿ ಭಟ್ ಅವರಿಗೆ ಧನ್ಯವಾದ ಸಲ್ಲಿಸಿದರು.
ನಿರ್ಮಾಪಕ ಮುನೇಗೌಡ ನಿರ್ಮಿಸುತ್ತಿರುವ ‘ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕುಗಳನ್ನು ಸುಮಾರು 2 ಕೋಟಿ ರೂಪಾಯಿಗೆ ಆನಂದ ಆಡಿಯೋ ಖರೀದಿಸಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.