
ನವದೆಹಲಿ, 15 ಜೂನ್ (ಹಿ.ಸ.) :
ಆ್ಯಂಕರ್ : ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ತಿಳುವಳಿಕೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ದರಗಳನ್ನು ತಕ್ಷಣ ಇಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಪವನ ಖೇರಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾರತದ ಆರ್ಥಿಕತೆಯ ಕುಸಿತಕ್ಕೆ ಅಮೆರಿಕ–ಇರಾನ್ ಸಂಘರ್ಷವೇ ಕಾರಣ ಎಂದು ಇಲ್ಲಿಯವರೆಗೆ ಹೇಳಲಾಗುತ್ತಿತ್ತು. ಹಣದುಬ್ಬರ, ಆರ್ಥಿಕ ಹಿನ್ನಡೆ ಹಾಗೂ ವಿವಿಧ ಸಮಸ್ಯೆಗಳಿಗೆ ಸರ್ಕಾರದ ನೀತಿಗಳ ಬದಲಾಗಿ ಪಶ್ಚಿಮ ಏಷ್ಯಾದ ಉದ್ವಿಗ್ನತೆಗಳನ್ನು ಕಾರಣವೆಂದು ಬಿಂಬಿಸಲಾಗುತ್ತಿತ್ತು ಎಂದು ಟೀಕಿಸಿದ್ದಾರೆ.
ಈಗ ಯುದ್ಧ ಅಂತ್ಯಗೊಂಡಿರುವುದರಿಂದ ಕೇಂದ್ರ ಸರ್ಕಾರದ ನೆಪಗಳೂ ಅಂತ್ಯಗೊಳ್ಳಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ. ಕಚ್ಚಾ ತೈಲದ ಬೆಲೆ ಇಳಿಕೆಯಾಗಲಿದ್ದು, ಪೂರೈಕೆ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಹಾಗೂ ಮಾರುಕಟ್ಟೆಯ ಬೇಡಿಕೆ ಸ್ಥಿರಗೊಳ್ಳಲಿದೆ. ಇದರ ನೇರ ಪ್ರಯೋಜನ ದೇಶದ ಗ್ರಾಹಕರಿಗೆ ದೊರೆಯಬೇಕು ಎಂದು ಅವರು ಹೇಳಿದ್ದಾರೆ.
ಹೀಗಾಗಿ ಪೆಟ್ರೋಲ್, ಡೀಸೆಲ್, ಸಂಕುಚಿತ ನೈಸರ್ಗಿಕ ಅನಿಲ, ಅಡುಗೆ ಅನಿಲ ಹಾಗೂ ದ್ರವೀಕೃತ ನೈಸರ್ಗಿಕ ಅನಿಲದ ದರಗಳಲ್ಲಿ ಹಿಂದೆ ಮಾಡಲಾಗಿದ್ದ ಹೆಚ್ಚಳವನ್ನು ಹಿಂತೆಗೆದು, ದರಗಳನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
“ಈ ಸಂತಸದ ಸುದ್ದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ನಲ್ಲಿರುವಾಗಲೇ ಘೋಷಿಸುತ್ತಾರೆಯೇ, ಅಥವಾ ದೇಶಕ್ಕೆ ಮರಳಿದ ಬಳಿಕ ಜನರು ಕಾಯಬೇಕೇ?” ಎಂದು ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.