
ವಿಜಯಪುರ, 12 ಜೂನ್ (ಹಿ.ಸ.) :
ಆಂಕರ್ : ದೇಶವು ಸಮೃದ್ಧಿ ಹಾಗೂ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಬೇಕಾದರೆ ರಾಮರಾಜ್ಯದ ಆದರ್ಶಗಳು ಸಾಕಾರಗೊಳ್ಳಬೇಕು ಎಂದು ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಶ್ರೀಕೃಷ್ಣ ವಾದಿರಾಜ ಮಠದ ಆವರಣದಲ್ಲಿ ಅಂದಾಜು ₹7 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ವಿದ್ಯಾರ್ಥಿ ನಿಲಯದ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ದಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಹಿರಿಯ ಸ್ವಾಮೀಜಿಗಳು ಸುಮಾರು ಆರು ದಶಕಗಳ ಹಿಂದೆ ನಿರ್ಮಿಸಿದ್ದ ವಿದ್ಯಾರ್ಥಿ ನಿಲಯವು ಇದೀಗ ಶಿಥಿಲಾವಸ್ಥೆಗೆ ತಲುಪಿದೆ. ಅದನ್ನು ಆಧುನಿಕ ಸೌಲಭ್ಯಗಳೊಂದಿಗೆ ಪುನರ್ ನಿರ್ಮಿಸಿ, ಇಂದಿನ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಎಲ್ಲ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನೂತನ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಈ ಮಹತ್ವದ ಯೋಜನೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಿದ್ದು, ₹1 ಕೋಟಿ ಹಣ ಸಂಗ್ರಹಿಸುವ ಭರವಸೆ ನೀಡಿದ್ದಾರೆ ಎಂದು ಶ್ಲಾಘಿಸಿದರು. ಸಂಸದ ರಮೇಶ ಜಿಗಜಿಣಗಿ ಅವರೂ ಸಹ ಅನುದಾನ ಬಿಡುಗಡೆ ಮಾಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಶ್ರೀಗಳು ಹೇಳಿದರು.
ಪೇಜಾವರ ಮಠದ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ವಿಜಯಪುರ ಜಿಲ್ಲೆಯ ಭಕ್ತರು ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ಈ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೂ ದೇಣಿಗೆ ನೀಡಲು ಮುಂದಾಗಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ ಎಂದರು.
ದೇಣಿಗೆಯ ಮೊತ್ತಕ್ಕಿಂತ ಭಕ್ತರ ಪ್ರೀತಿ, ವಿಶ್ವಾಸ ಹಾಗೂ ಸೇವಾ ಮನೋಭಾವವೇ ಮುಖ್ಯ. ಅನೇಕ ಹಿರಿಯರು ಒಂದು ಕೊಠಡಿ ನಿರ್ಮಾಣಕ್ಕಾಗಿ ₹5 ಲಕ್ಷ ದೇಣಿಗೆ ನೀಡಲು ಮುಂದೆ ಬಂದಿರುವುದು ಸಂತಸದ ಸಂಗತಿ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ಪೇಜಾವರ ಮಠಕ್ಕೂ ವಿಜಯಪುರ ಜಿಲ್ಲೆಯ ಜನರಿಗೂ ಅವಿನಾಭಾವ ಸಂಬಂಧವಿದೆ ಎಂದರು. ಹಿರಿಯ ಸ್ವಾಮೀಜಿಗಳು 1964ರಲ್ಲಿ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ನಿರ್ಮಿಸಿದ್ದರು. 1972ರ ಬರಗಾಲದ ಸಂದರ್ಭದಲ್ಲಿ ಸಿಂದಗಿ ತಾಲೂಕಿನ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಿ ಜನರ ನೆರವಿಗೆ ಧಾವಿಸಿದ್ದರು. ಚ
ಕ್ಕಪಡಸಲಾಗಿ ಬಾಂದಾರ ನಿರ್ಮಾಣಕ್ಕೂ ಶ್ರಮದಾನ ಮಾಡಿದ್ದರು ಎಂದು ಸ್ಮರಿಸಿದರು.
ಮುಂದಿನ ಐದು ವರ್ಷಗಳಲ್ಲಿ ಹಿರಿಯ ಸ್ವಾಮೀಜಿಗಳ ಜನ್ಮ ಶತಮಾನೋತ್ಸವ ನಡೆಯಲಿದ್ದು, ಅವರ ಕನಸುಗಳನ್ನು ನನಸಾಗಿಸುವ ಉದ್ದೇಶವನ್ನು ಪ್ರಸ್ತುತ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥರು ಹೊಂದಿದ್ದಾರೆ. ಈ ಕಾರ್ಯಕ್ಕೆ ಭಕ್ತರು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಅವರು ಸ್ವಾಗತಿಸಿ, ಶ್ರೀಮಠದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ವಿಜಯಪುರದ ಭಕ್ತರು ದೇಣಿಗೆ ನೀಡಲು ಮುಂದೆ ಬಂದಿರುವುದು ಪುಣ್ಯದ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ₹5 ಲಕ್ಷ ದೇಣಿಗೆ ನೀಡುವ ಸಂಕಲ್ಪ ಮಾಡಿದ ಗಿರೀಶ ಕುಲಕರ್ಣಿ ಹಾಗೂ ಹೆಚ್ಚಿನ ದೇಣಿಗೆ ನೀಡಲು ಮುಂದಾದ ಡಾ. ಢಾಣಕ ಶಿರೂರ ಮತ್ತು ಗುರುರಾಜ ಸೊಂಡೂರ ಅವರನ್ನು ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಡಾ. ಮಂಗಲಗಿ, ಡಾ. ಮಲಘಾಣ, ಅಶೋಕರಾವ್, ವಿಕಾಸ ಪದಕಿ, ವಿ.ಬಿ. ಕುಲಕರ್ಣಿ, ಗೋವಿಂದ ಜೋಶಿ, ವಿಜಯ ಜೋಶಿ, ಡಾ. ಪ್ರಾಣೇಶ ಜಹಾಗೀರದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande