
ಟೆಹ್ರಾನ್/ವಾಷಿಂಗ್ಟನ್, 08 ಮೇ (ಹಿ.ಸ.) :
ಆ್ಯಂಕರ್ : ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗಳ ನಡುವೆಯೇ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಟೆಹ್ರಾನ್ನಿಂದ ಹಾರ್ಮುಜ್ ಜಲಸಂಧಿವರೆಗೆ ಸೇನಾ ಚಟುವಟಿಕೆಗಳು ಹೆಚ್ಚಾಗಿದ್ದು, ಎರಡೂ ರಾಷ್ಟ್ರಗಳು ಪರಸ್ಪರ ದಾಳಿ–ಪ್ರತಿದಾಳಿಗಳ ಆರೋಪ ಮಾಡಿವೆ.
ಇರಾನ್ ಸೇನೆಯ ಪ್ರಕಾರ, ಅಮೆರಿಕ ಪಡೆಗಳು ಕರಾವಳಿ ಸಮುದ್ರ ಪ್ರದೇಶದಲ್ಲಿ ಇರಾನಿನ ತೈಲ ಸಾಗಣೆ ಹಡಗನ್ನು ಹಾಗೂ ಫುಜೈರಾ ಬಂದರು ಸಮೀಪ ಮತ್ತೊಂದು ಹಡಗನ್ನು ಗುರಿಯಾಗಿಸಿಕೊಂಡಿವೆ. ಇದೇ ವೇಳೆ, ಅಮೆರಿಕ ವಾಯುಪಡೆಯು ದಕ್ಷಿಣ ಇರಾನ್ನ ಬಂದರ್ ಖಮೀರ್, ಸಿರಿಕ್ ಮತ್ತು ಖೆಶ್ಮ್ ದ್ವೀಪದ ನಾಗರಿಕ ಪ್ರದೇಶಗಳ ಮೇಲೆ ವಾಯುದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿದೆ. ಶತ್ರುಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗಿದೆ ಎಂದು ಇರಾನ್ ತಿಳಿಸಿದೆ.
ಅಮೆರಿಕದ ಸೇನಾ ಕೇಂದ್ರ ಕಮಾಂಡ್ ಆತ್ಮರಕ್ಷಣೆಯ ಕ್ರಮವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿದೆ. ಇರಾನ್ ಕ್ಷಿಪಣಿಗಳು, ಮಾನವರಹಿತ ವಿಮಾನಗಳು ಮತ್ತು ಅತಿ ವೇಗದ ದಾಳಿ ದೋಣಿಗಳ ಮೂಲಕ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನೌಕಾಪಡೆಯ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಇದರ ಪರಿಣಾಮವಾಗಿ ದಾಳಿಗೆ ಕಾರಣವಾದ ಇರಾನಿನ ಸೇನಾ ತಾಣಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯನ್ನು “ಕಠಿಣ ಎಚ್ಚರಿಕೆ” ಎಂದು ಬಣ್ಣಿಸಿದ್ದಾರೆ. “ಸೇನಾ ವಿರಾಮ ಮುಂದುವರಿಯಲಿದೆ. ಆದರೆ ಇರಾನ್ ನಮ್ಮನ್ನು ವಂಚಿಸಿದೆ. ಅಗತ್ಯವಿದ್ದ ಕಾರಣಕ್ಕೆ ನಾವು ಪ್ರತಿದಾಳಿ ನಡೆಸಿದ್ದೇವೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಯುದ್ಧ ಅಂತ್ಯಗೊಳಿಸುವ ಮಾತುಕತೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂದೂ ಅವರು ಹೇಳಿದ್ದಾರೆ.
ಇನ್ನೊಂದೆಡೆ, ಅಮೆರಿಕದ ಪ್ರಸ್ತಾವನೆಯನ್ನು ಪರಿಗಣಿಸುತ್ತಿದ್ದೇವೆ ಎಂದು ಹೇಳಿರುವ ಇರಾನ್, ಹಾರ್ಮುಜ್ ಜಲಸಂಧಿಯ ಪ್ರಮುಖ ಸಮುದ್ರ ಮಾರ್ಗಗಳ ಮೇಲೆ ತನ್ನ ನಿಯಂತ್ರಣವನ್ನು ಬಲಪಡಿಸಲು ಕ್ರಮ ಕೈಗೊಳ್ಳುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.
ಹಡಗು ಸಂಚಾರ ಮಾಹಿತಿ ಸಂಸ್ಥೆಯ ವರದಿ ಪ್ರಕಾರ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ನೌಕೆಗಳಿಗೆ ಹೊಸ ಅನುಮತಿ ವ್ಯವಸ್ಥೆಯನ್ನು ಇರಾನ್ ಜಾರಿಗೆ ತಂದಿದೆ. ಈ ಕ್ರಮದ ಪರಿಣಾಮ ಜಲಸಂಧಿಯಲ್ಲಿ ಹಡಗು ಸಂಚಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಈ ಬೆಳವಣಿಗೆಗಳ ನಡುವೆಯೇ ಜಾಗತಿಕ ತೈಲ ಮಾರುಕಟ್ಟೆಯಲ್ಲೂ ಅಸ್ಥಿರತೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾನದಂಡವೆಂದು ಪರಿಗಣಿಸಲ್ಪಡುವ ಬ್ರೆಂಟ್ ಕಚ್ಚಾತೈಲದ ಬೆಲೆ ಪ್ರತಿ ಪೀಪಾಯಿಗೆ ಸುಮಾರು 100 ಡಾಲರ್ಗೆ ಏರಿಕೆಯಾಗಿದೆ. ಯುದ್ಧದ ಉದ್ವಿಗ್ನತೆ ಆರಂಭವಾಗುವ ಮೊದಲು ಇದೇ ಬೆಲೆ ಸುಮಾರು 70 ಡಾಲರ್ ಇತ್ತು.
ಫ್ಲೋರಿಡಾದ ಟ್ಯಾಂಪಾ ಮೂಲದ ಅಮೆರಿಕ ಸೇನಾ ಕೇಂದ್ರ ಕಮಾಂಡ್, ಇತ್ತೀಚಿನ ವಾಯುದಾಳಿ ಸಂಪೂರ್ಣ ಆತ್ಮರಕ್ಷಣೆಯ ಉದ್ದೇಶದಿಂದ ನಡೆಸಲಾಗಿದೆ ಎಂದು ಪುನರುಚ್ಚರಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ಆತ್ಮರಕ್ಷಣೆಯ ವಿಷಯದಲ್ಲಿ ಅಮೆರಿಕ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ರಾತ್ರಿಯಿಡೀ ಟೆಹ್ರಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ. ವಾಯು ರಕ್ಷಣಾ ವ್ಯವಸ್ಥೆಯನ್ನು ತುರ್ತುವಾಗಿ ಕಾರ್ಯಗತಗೊಳಿಸಲಾಗಿದೆ. ದಕ್ಷಿಣ ಇರಾನ್ನ ಮಿನಾಬ್ ನಗರದಲ್ಲಿನ ನೌಕಾ ನೆಲೆ ಮೇಲಿನ ದಾಳಿಯನ್ನು ಸ್ಥಳೀಯ ಆಡಳಿತ ದೃಢಪಡಿಸಿದೆ. ಬಂದರ್ ಅಬ್ಬಾಸ್ ನಗರದಲ್ಲೂ ಸ್ಫೋಟಗಳು ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯ ಮೂಲಕ ಅಮೆರಿಕದ ಮೂರು ಯುದ್ಧನೌಕೆಗಳು ಸುರಕ್ಷಿತವಾಗಿ ಹಾದುಹೋಗಿವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಅಮೆರಿಕ ಸೇನೆಯು ಇರಾನಿನ ದಾಳಿ ದೋಣಿಗಳು, ಕ್ಷಿಪಣಿಗಳು ಹಾಗೂ ಮಾನವರಹಿತ ವಿಮಾನಗಳನ್ನು ನಾಶಪಡಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಇರಾನ್ ಶೀಘ್ರದಲ್ಲೇ ಒಪ್ಪಂದಕ್ಕೆ ಬರದಿದ್ದರೆ ಇನ್ನಷ್ಟು ಕಠಿಣ ಸೇನಾ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆದರೆ ವಿದೇಶಿ ಒತ್ತಡಕ್ಕೆ ಇರಾನ್ ತಲೆಬಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯನ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೇಶ ಸಿದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa