
ಬೆಂಗಳೂರು, 08 ಮೇ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರದಲ್ಲಿ ಏಪ್ರಿಲ್ 29ರಂದು ಸುರಿದ ಭಾರಿ ಮಳೆಯಿಂದ ಉರುಳಿಬಿದ್ದ ಮರಗಳು ಮತ್ತು ಕೊಂಬೆಗಳ ತೆರವು ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ದ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಣೆ ನೀಡಿರುವ ಅವರು, “ಸಿಎಂ ಕುರ್ಚಿ ತೆರವುಗೊಳಿಸುವಲ್ಲಿ ಇರುವ ಆಸಕ್ತಿ, ರಸ್ತೆಯಲ್ಲಿ ಬಿದ್ದಿರುವ ಮರ ತೆರವುಗೊಳಿಸುವಲ್ಲಿ ಇಲ್ಲ” ಎಂದು ಟೀಕಿಸಿದ್ದಾರೆ.
ಏಪ್ರಿಲ್ 29ರ ಮಳೆಯಿಂದ ನಗರದಲ್ಲಿ 500ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, ವಾರ ಕಳೆದರೂ 1,305ಕ್ಕೂ ಹೆಚ್ಚು ಮರಗಳು ಮತ್ತು ಕೊಂಬೆಗಳು ಇನ್ನೂ ರಸ್ತೆ ಬದಿಯಲ್ಲೇ ಬಿದ್ದಿವೆ. ಇದರಿಂದ ಪಾದಚಾರಿ ಮಾರ್ಗಗಳು ಮುಚ್ಚಲ್ಪಟ್ಟಿದ್ದು, ಸಾರ್ವಜನಿಕರು ಜೀವಭಯದ ನಡುವೆ ರಸ್ತೆಗಳಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಉಪ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಅಶೋಕ್ ತೀವ್ರ ಟೀಕೆ ವ್ಯಕ್ತಪಡಿಸಿದ್ದು, “ಮರ ತೆರವುಗಿಂತ ಸಿಎಂ ಕುರ್ಚಿ ತೆರವುಗೊಳಿಸುವ ರಾಜಕೀಯದಲ್ಲೇ ಅವರು ಬ್ಯುಸಿಯಾಗಿದ್ದಾರೆ” ಎಂದು ಹೇಳಿದ್ದಾರೆ. “ದೆಹಲಿಯಿಂದ ಶುಭ ಸುದ್ದಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
“30 ತಂಡಗಳನ್ನು ನಿಯೋಜಿಸಲಾಗಿದೆ” ಎಂಬ ಸರ್ಕಾರದ ಹೇಳಿಕೆ ನೆಲಮಟ್ಟದಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಿರುವ ಅಶೋಕ್, ರಸ್ತೆಗಳ ಬದಿಯಲ್ಲಿ ಇನ್ನೂ ಅಸ್ತವ್ಯಸ್ತವಾಗಿ ಕೊಂಬೆಗಳ ರಾಶಿ ಬಿದ್ದಿರುವುದೇ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
“‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಜಾಹೀರಾತು ಮತ್ತು ಪ್ರಚಾರಕ್ಕೆ ಒತ್ತು ನೀಡುವ ಸರ್ಕಾರಕ್ಕೆ, ರಸ್ತೆ ಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಸಾಮರ್ಥ್ಯವೂ ಇಲ್ಲವೇ?” ಎಂದು ಪ್ರಶ್ನಿಸಿರುವ ಅವರು, ಇದು ಕೇವಲ ಆಡಳಿತ ವೈಫಲ್ಯವಲ್ಲ, ಜನರ ಸುರಕ್ಷತೆಯ ಮೇಲಿನ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಸರ್ಕಾರವನ್ನು ಉದ್ದೇಶಿಸಿ, “ಬಜೆಟ್ ಇಲ್ಲವೇ? ಇಚ್ಛಾಶಕ್ತಿ ಇಲ್ಲವೇ? ಅಥವಾ ಮರ ತೆರವಿಗೂ ಕಮಿಷನ್ ಬೇಕೇ?” ಎಂದು ಪ್ರಶ್ನಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa