
ವಿಜಯಪುರ, 07 ಮೇ (ಹಿ.ಸ.):
ಆಂಕರ್ : ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಮಾದರಿಯಾಗುವಂತಹ ಘಟನೆ ವಿಜಯಪುರ ಜಿಲ್ಲೆಯ
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ರಸ್ತೆ ಮಧ್ಯೆ ಸಿಕ್ಕಿದ್ದ ಸುಮಾರು 30 ಗ್ರಾಂ ತೂಕದ ಬಂಗಾರದ ಆಭರಣವನ್ನು ಯಾವುದೇ ಆಸೆಪಡದೇ ಪೊಲೀಸರಿಗೆ ಒಪ್ಪಿಸಿದ ಮೂವರು ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇಂದು ದಿನಾಂಕ 07.05.2026 ರಂದು ಮುದ್ದೇಬಿಹಾಳ ನಗರದಿಂದ ಹಿರೇಮೂರಳ ಗ್ರಾಮದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 30 ಗ್ರಾಂ ಬಂಗಾರದ ಆಭರಣವನ್ನು ಅನವಧಾನದಿಂದ ಕಳೆದುಕೊಂಡಿದ್ದರು. ಕಾರಿನಿಂದ ಜಾರಿ ಬಿದ್ದ ಬ್ಯಾಗ್ ರಸ್ತೆ ಬದಿಯಲ್ಲಿ ಬಿದ್ದಿದ್ದು, ಅದೇ ಮಾರ್ಗವಾಗಿ ತೆರಳುತ್ತಿದ್ದ ಅಣ್ಣಾಜಿ ನೇಮಪ್ಪ ರಾಥೋಡ್, ದೇವರಾಜ್ ಭೀಮಪ್ಪ ಗಾಂಜಿ ಹಾಗೂ ಪರಶುರಾಮ್ ಯಮನಪ್ಪ ಚಲವಾದಿ ಅವರಿಗೆ ಅದು ಕಂಡು ಬಂದಿದೆ.
ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಅಮೂಲ್ಯ ಬಂಗಾರದ ಆಭರಣಗಳಿರುವುದು ತಿಳಿದು ಬಂದರೂ, ಯಾವುದೇ ಸ್ವಾರ್ಥ ತೋರದೆ ಮೂವರು ಯುವಕರು ತಕ್ಷಣ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ತೆರಳಿ ಬ್ಯಾಗ್ ಹಾಗೂ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ತನಿಖೆ ನಡೆಸಿ, ಆಭರಣದ ನಿಜವಾದ ವಾರಸುದಾರರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮರಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪ್ರಾಮಾಣಿಕತೆ ಮೆರೆದ ಮೂವರು ಯುವಕರನ್ನು ಅಭಿನಂದಿಸಿ ಪ್ರಶಂಸಿಸಿದರು. ಇಂತಹ ಘಟನೆಗಳು ಸಮಾಜದಲ್ಲಿ ಇನ್ನೂ ಮಾನವೀಯತೆ ಮತ್ತು ನೈತಿಕ ಮೌಲ್ಯಗಳು ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, “ಕಳೆದುಹೋದ ಚಿನ್ನಕ್ಕಿಂತ ದೊಡ್ಡದು ಇವರ ಪ್ರಾಮಾಣಿಕತೆ” ಎಂದು ಹಲವರು ಪ್ರಶಂಸಿಸಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / jyothi deshpande