
ನವದೆಹಲಿ, 06 ಮೇ (ಹಿ.ಸ.) :
ಆ್ಯಂಕರ್ : ವಿಯೆಟ್ನಾಂ ಅಧ್ಯಕ್ಷ ಟೋ ಲಾಮ್ ಅವರಿಗೆ ಭಾರತ ಪ್ರವಾಸದ ಅಂಗವಾಗಿ ಬುಧವಾರ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ ನೀಡಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಸ್ವಾಗತ ಸಮಾರಂಭದ ಬಳಿಕ ಅಧ್ಯಕ್ಷ ಲಾಮ್ ಅವರು ರಾಜಘಾಟ್ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪ್ರಧಾನಮಂತ್ರಿ ಮೋದಿ ಅವರೊಂದಿಗೆ ಹೈದರಾಬಾದ್ ಭವನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಈ ಮಾತುಕತೆಯಲ್ಲಿ ಭಾರತ–ವಿಯೆಟ್ನಾಂ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ, ರಕ್ಷಣಾ ಸಹಕಾರ, ವ್ಯಾಪಾರ ಹಾಗೂ ಹೂಡಿಕೆ ವಿಸ್ತರಣೆ, ಸಮುದ್ರ ಭದ್ರತೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು.
ಮಂಗಳವಾರ ಸಂಜೆ ನವದೆಹಲಿಗೆ ಆಗಮಿಸಿದ ಅಧ್ಯಕ್ಷ ಟೋ ಲಾಮ್ ಅವರ ಇದು ಮೊದಲ ಅಧಿಕೃತ ಭಾರತ ಭೇಟಿ ಆಗಿದೆ. ಭಾರತ ಮತ್ತು ವಿಯೆಟ್ನಾಂ ದೇಶಗಳು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಹತ್ತು ವರ್ಷಗಳನ್ನು ಆಚರಿಸುತ್ತಿರುವ ಹಿನ್ನೆಲೆ ಈ ಭೇಟಿ ವಿಶೇಷ ಮಹತ್ವ ಪಡೆದಿದೆ.
ಭಾರತ ಪ್ರವಾಸದ ಆರಂಭದಲ್ಲಿ ಅವರು ಬೋಧಗಯದಲ್ಲಿರುವ ಮಹಾಬೋಧಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ತಮ್ಮ ಪ್ರವಾಸದ ಭಾಗವಾಗಿ ಅವರು ಮುಂಬೈಗೂ ಭೇಟಿ ನೀಡಲಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಭೇಟಿ, ಭಾರತ–ವಿಯೆಟ್ನಾಂ ನಡುವಿನ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa