ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿ ಪ್ರಕರಣ ; ನಾಲ್ವರ ಬಂಧನ
ಕೋಲ್ಕತ್ತಾ, 31 ಮೇ (ಹಿ.ಸ.) : ಆ್ಯಂಕರ್ : ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದಿರುವುದಾಗಿ ಹೇಳಲಾದ ದಾಳಿ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನೂ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ
ಹಲ್ಲೆಗೊಳಗಾದ ಅಭಿಷೇಕ ಬ್ಯಾನರ್ಜಿ


ಕೋಲ್ಕತ್ತಾ, 31 ಮೇ (ಹಿ.ಸ.) :

ಆ್ಯಂಕರ್ : ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದಿರುವುದಾಗಿ ಹೇಳಲಾದ ದಾಳಿ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನೂ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ಪ್ರದೇಶದ ಸಿಸಿಟಿವಿ ಮತ್ತು ಇತರ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆರೋಪಿಗಳ ಗುರುತು ಪತ್ತೆಹಚ್ಚಲಾಗಿದ್ದು, ಅದರ ಆಧಾರದ ಮೇಲೆ ಬಂಧನ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.

ಶನಿವಾರ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರ ಪ್ರದೇಶಕ್ಕೆ ಭೇಟಿ ನೀಡಿದ್ದ ಅಭಿಷೇಕ್ ಬ್ಯಾನರ್ಜಿ, ವಿಧಾನಸಭಾ ಚುನಾವಣೆಯ ಮತದಾನ ನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಸ್ಥಳೀಯರ ಪ್ರತಿಭಟನೆ ಎದುರಾಯಿತು.

ಪ್ರತಿಭಟನಾಕಾರರು ಅವರ ವಾಹನಗಳ ಮೆರವಣಿಗೆಯ ಮೇಲೆ ಚಪ್ಪಲಿ, ಮೊಟ್ಟೆ ಹಾಗೂ ಇತರ ವಸ್ತುಗಳನ್ನು ಎಸೆದಿದ್ದು, ಕಳ್ಳ-ಕಳ್ಳ ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಭದ್ರತಾ ಕಾರಣಕ್ಕಾಗಿ ಹೆಲ್ಮೆಟ್ ಧರಿಸಿಕೊಂಡಿದ್ದರು. ತಳ್ಳಾಟ-ನೂಕಾಟದ ವೇಳೆ ಅವರ ಅಂಗಿಯೂ ಹರಿದು ಹೋಗಿದೆ ಎನ್ನಲಾಗಿದೆ.

ಘಟನೆಯ ನಂತರ ಪ್ರತಿಕ್ರಿಯೆ ನೀಡಿದ ಅಭಿಷೇಕ್ ಬ್ಯಾನರ್ಜಿ, ಈ ದಾಳಿ ಬಿಜೆಪಿ ರೂಪಿಸಿದ ಪೂರ್ವನಿಯೋಜಿತ ಸಂಚಿನ ಭಾಗವಾಗಿದೆ ಎಂದು ಆರೋಪಿಸಿದರು. ತಮ್ಮ ಭೇಟಿಯ ಮಾಹಿತಿ ಮೊದಲೇ ಬಹಿರಂಗವಾಗಿದ್ದ ಕಾರಣ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ವಿವಿಧ ವಿಡಿಯೊ ದೃಶ್ಯಗಳು ಮತ್ತು ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಾನುವಾರ ಬರೂಯಿಪುರ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಈ ಮಧ್ಯೆ ತೃಣಮೂಲ ಕಾಂಗ್ರೆಸ್, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತಡವಾಗಿ ಆಗಮಿಸಿದ್ದು ಹಾಗೂ ಸಮರ್ಪಕ ಭದ್ರತಾ ವ್ಯವಸ್ಥೆ ಒದಗಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದೆ. ಪಕ್ಷವು ದಾಳಿಕೋರರ ತಕ್ಷಣದ ಬಂಧನಕ್ಕೆ ಆಗ್ರಹಿಸಿದ್ದು, ಕೆಲ ಆರೋಪಿಗಳಿಗೆ ಬಿಜೆಪಿ ಸಂಪರ್ಕವಿದೆ ಎಂದು ಹೇಳಿದೆ. ಈ ಸಂಬಂಧ ಕೆಲವು ವಿಡಿಯೊಗಳನ್ನೂ ಪಕ್ಷ ಬಿಡುಗಡೆ ಮಾಡಿದೆ.

ಘಟನೆಯ ಬಳಿಕ ಅಭಿಷೇಕ್ ಬ್ಯಾನರ್ಜಿ ಅವರನ್ನು ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ನಂತರ ಮಮತಾ ಬ್ಯಾನರ್ಜಿ

ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ವೈದ್ಯಕೀಯ ಪರೀಕ್ಷೆಯ ಬಳಿಕ ಆಸ್ಪತ್ರೆಯಲ್ಲಿ ದಾಖಲಿಸುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದರು.

ಇನ್ನೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಹಲವು ನಾಯಕರು ಘಟನೆಯನ್ನು ಖಂಡಿಸಿದ್ದಾರೆ.

ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಇತರ ಶಂಕಿತರ ಗುರುತು ಪತ್ತೆಗಾಗಿ ವಿಡಿಯೊ ದೃಶ್ಯಾವಳಿ ಹಾಗೂ ಸಾಕ್ಷ್ಯಗಳ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande