
ಕಲಬುರಗಿ, 31 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಹೊಸ ಸರ್ಕಾರದ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆಗಳ ಬಗ್ಗೆ ಚರ್ಚೆ ನಡೆಯಬೇಕಾದರೆ ಮೊದಲು ಪ್ರಸ್ತಾವನೆ ಬರಬೇಕು. ಪ್ರಸ್ತಾವನೆ ಬಂದ ಬಳಿಕ ಎಷ್ಟು ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕು ಹಾಗೂ ಎಷ್ಟು ಮಂದಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮೊದಲ ಹಂತದಲ್ಲಿ ಕೆಲವರಿಗೆ ಮಾತ್ರ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಬಳಿಕ ಸುಮಾರು ಹದಿನೈದು ದಿನಗಳ ನಂತರ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ನಡೆಸಿ ಉಳಿದವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಸುಮಾರು ಎಂಟುರಿಂದ ಹತ್ತು ಮಂದಿವರೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಲ್ಲಿಸುವ ಪಟ್ಟಿಯ ಆಧಾರದ ಮೇಲೆ ಸಚಿವರ ಸಂಖ್ಯೆಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಜೂನ್ 3ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಸಚಿವ ಸಂಪುಟ ರಚನೆ, ಉಪಮುಖ್ಯಮಂತ್ರಿ ಹುದ್ದೆಗಳ ಹಂಚಿಕೆ ಸೇರಿದಂತೆ ಎಲ್ಲ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಖರ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ಕುರಿತೂ ಅವರು ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನನ್ನು ನೇಮಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಪಕ್ಷ ಸಂಘಟನೆಗೆ ಬಲ ತುಂಬುವ, ಜನಬೆಂಬಲ ಹೊಂದಿರುವ ಹಾಗೂ ಸರ್ಕಾರ ಮತ್ತು ಪಕ್ಷದ ನಡುವೆ ಉತ್ತಮ ಸಮನ್ವಯ ಸಾಧಿಸುವ ಸಾಮರ್ಥ್ಯವುಳ್ಳ ವ್ಯಕ್ತಿಯನ್ನು ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.