
ಅಜ್ಜಂಪುರ, 31 ಮೇ (ಹಿ.ಸ.) :
ಆ್ಯಂಕರ್ : ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಜ್ಜಂಪುರ ಮತ್ತು ಬೀರೂರು ಭಾಗಗಳಲ್ಲಿ ಕೈಗೆತ್ತಿಕೊಳ್ಳಲಾದ ಮಹತ್ವದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಚನ್ನರಾಯಪಟ್ಟಣದಲ್ಲಿ ಹೆಚ್ಚುವರಿ ನಿಲುಗಡೆ ಕಲ್ಪಿಸಲಾದ ಹಾಸನ–ಸೊಲ್ಲಾಪುರ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಅಜ್ಜಂಪುರದಲ್ಲಿರುವ ಲೆವೆಲ್ ಕ್ರಾಸಿಂಗ್ ಸಂಖ್ಯೆ 138ರ ಬದಲಿಗೆ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆ (ಆರ್ಒಬಿ) ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.
ಸುಮಾರು ₹50.48 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಮೇಲ್ಸೇತುವೆ ರಸ್ತೆ ಸಂಚಾರದ ಸುರಕ್ಷತೆ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಿದೆ.
ಇದೇ ಸಂದರ್ಭದಲ್ಲಿ ಅಜ್ಜಂಪುರ–ಬೀರೂರು ರೈಲು ನಿಲ್ದಾಣಗಳ ನಡುವಿನ ಪಾದಚಾರಿ ಸುರಂಗ ಮಾರ್ಗ (ಪಾದಚಾರಿ ಸಬ್ವೇ) ನಿರ್ಮಾಣಕ್ಕೂ ಶಂಕುಸ್ಥಾಪನೆ ನಡೆಸಲಾಯಿತು. ₹5.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸುವುದರ ಜೊತೆಗೆ ರೈಲು ಹಳಿಗಳ ಮೇಲಿನ ಅನಧಿಕೃತ ದಾಟುವಿಕೆಯನ್ನು ತಡೆಯಲಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ, ಅಜ್ಜಂಪುರ ರೈಲು ನಿಲ್ದಾಣವನ್ನು ಶೀಘ್ರದಲ್ಲೇ ಆಧುನಿಕ ಪ್ರಯಾಣಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ವರ್ಷದಲ್ಲಿ 17 ಜೋಡಿ ರೈಲು ಸೇವೆಗಳನ್ನು ಕಾಯಂ ಮಾಡಲಾಗಿದ್ದು, ಪ್ರಯಾಣಿಕರ ದರವನ್ನು ಶೇಕಡಾ 30ರಷ್ಟು ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದ ಅವರು, ಕರ್ನಾಟಕದ 61 ರೈಲು ನಿಲ್ದಾಣಗಳನ್ನು ಸುಮಾರು ₹2,000 ಕೋಟಿ ವೆಚ್ಚದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ನಂತರ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಕಲ್ಪಿಸಲಾದ ಹಾಸನ–ಸೊಲ್ಲಾಪುರ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಾಯಿತು. ಚನ್ನರಾಯಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ ಈ ಹೆಚ್ಚುವರಿ ನಿಲುಗಡೆಯನ್ನು ಕಲ್ಪಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.