
ರಾಯಚೂರು, 31 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳ ಮೀಸಲಾತಿ ವಿಷಯದಲ್ಲಿ ಐತಿಹಾಸಿಕ ದ್ರೋಹ ಎಸಗಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಬಿ. ಶ್ರೀರಾಮುಲು, ಈ ಅನ್ಯಾಯದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸಮುದಾಯದ ಮುಖಂಡರೊಂದಿಗೆ ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಮಾಜಿ ಸಂಸದ ಬಿ.ವಿ. ನಾಯಕ್ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಸಮುದಾಯದ ಯುವಕ-ಯುವತಿಯರ ಶಿಕ್ಷಣ ಮತ್ತು ಉದ್ಯೋಗದ ಭವಿಷ್ಯವನ್ನು ಕಾಂಗ್ರೆಸ್ ಸರ್ಕಾರ ತನ್ನ ಹಿಡಿತದಲ್ಲಿ ಬಂಧಿಸಿರುವಂತಾಗಿದೆ ಎಂದು ಟೀಕಿಸಿದರು.
ಸರ್ಕಾರದ ನೀತಿಗಳಿಂದ ಪರಿಶಿಷ್ಟ ಪಂಗಡ ಸಮುದಾಯದ ಹಕ್ಕುಗಳಿಗೆ ಧಕ್ಕೆಯಾಗಿದ್ದು, ಇದನ್ನು ಪ್ರಶ್ನಿಸುವುದು ಮತ್ತು ಹೋರಾಟದ ಮೂಲಕ ನ್ಯಾಯಕ್ಕಾಗಿ ಧ್ವನಿ ಎತ್ತುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಮೀಸಲಾತಿ ವಿಚಾರದಲ್ಲಿ ಸರ್ಕಾರ ಅನುಸರಿಸುತ್ತಿರುವ ನೀತಿಗಳ ವಿರುದ್ಧ ರಾಜ್ಯದಾದ್ಯಂತ ಜನಜಾಗೃತಿ ಮೂಡಿಸುವ ಜೊತೆಗೆ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸಮುದಾಯದ ಹಿತಾಸಕ್ತಿಗಳ ರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀರಾಮುಲು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ರಾಜುಗೌಡ, ಮಾಜಿ ಸಂಸದ ಬಿ.ವಿ. ನಾಯಕ್, ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಶಾಸಕರಾದ ತಿಪ್ಪರಾಜು, ಸೋಮಲಿಂಗಪ್ಪ, ಗಂಗಾಧರ ನಾಯಕ್, ಪ್ರತಾಪಗೌಡ ಪಾಟೀಲ್, ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾ ಉಪಾಧ್ಯಕ್ಷ ಓಬಳೇಶ್ ಸೇರಿದಂತೆ ಸಮುದಾಯದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಹಕ್ಕುಗಳು, ಮೀಸಲಾತಿ ಸಂಬಂಧಿತ ಬೆಳವಣಿಗೆಗಳು ಹಾಗೂ ಮುಂದಿನ ಹೋರಾಟದ ಕಾರ್ಯಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರಬಲ ಹೋರಾಟ ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.