
ಕೋಲಾರ,೩೧ ಮೇ (ಹಿ.ಸ) :
ಆ್ಯಂಕರ್ : ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ ಹೊಸ ಸಂಪುಟ ರಚನೆ ಹೊಸ್ತಿಲಲ್ಲಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಪ್ರವರ್ಗ-೧ರಲ್ಲಿನ ಜಾತಿಗಳಿಗೆ ಪ್ರಾತಿನಿಧ್ಯ ನೀಡಿ, ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಕೋಲಾರ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಮತ್ತಿತರ ಪದಾಧಿಕಾರಿಗಳು ಕಾಂಗ್ರೆಸ್ ಹೈಕಮಾಂಡ್ರವರನ್ನು ಒತ್ತಾಯಿಸಿದ್ದಾರೆ.
ಜಿಲ್ಲಾ ಯಾದವ ಸಂಘದ ಪದಾಧಿಕಾರಿಗಳ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯ ಯಾದವ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರವರ್ಗ-೧ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಡಿ.ಟಿ.ಶ್ರೀನಿವಾಸ್ಗೆ ಸಚಿವ ಸ್ಥಾನ ನೀಡುವ ಮೂಲಕ ಈ ವರ್ಗದಲ್ಲಿ ಬರುವ ೯೫ ಜಾತಿಗಳಿಗೆ ನ್ಯಾಯ ಒದಗಿಸಲು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಯಾದವ (ಗೊಲ್ಲ) ಸಮುದಾಯವು ಸುಮಾರು ೧೯ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದು, ಸಮುದಾಯದ ನಾಯಕರಾಗಿದ್ದ ದಿವಂಗತ ಎ.ಕೃಷ್ಣಪ್ಪ ಅವರ ನಂತರ ರಾಜಕೀಯವಾಗಿ ಪ್ರಾತಿನಿಧ್ಯ ಇಲ್ಲದಂತಾಗಿದೆ. ಅದೇ ರೀತಿ ಪ್ರವರ್ಗ-೧ರ ಇತರೆ ಸಮುದಾಯಗಳಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಈ ಹಿನ್ನಲೆಯಲ್ಲಿ ದಿವಂಗತ ಎ.ಕೃಷ್ಣಪ್ಪ ನಂತರ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ನೇತೃತ್ವವನ್ನು ಡಿ.ಟಿ.ಶ್ರೀನಿವಾಸ್ ವಹಿಸಿಕೊಂಡಿದ್ದು, ಯಾದವ ಸಂಘಕ್ಕೆ ಅಧ್ಯಕ್ಷರಾಗಿ ಚುನಾವಣೆ ಮುಖಾಂತರ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಆಗ್ನೇಯ ಶಿಕ್ಷಕರ ವಿಧಾನಪರಿಷತ್ ಕ್ಷೇತ್ರದ ಇತಿಹಾಸ ಗಮನಿಸಿದಾಗ ಇಲ್ಲಿ ಕಾಂಗ್ರೆಸ್ ಪಕ್ಷ ಎಂದೂ ಗೆಲ್ಲಲು ಸಾಧ್ಯವಾಗಿರಲಿಲ್ಲ ಅಂತಹ ಕಡೆ ಸ್ಪರ್ಧಿಸಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಮತ್ತು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿಯೂ ಕೆಲಸ ಮಾಡುತ್ತಿದ್ದು, ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಪ್ರವರ್ಗ-೧ರ ಸಮುದಾಯಗಳಿಗೆ ನ್ಯಾಯ ಒದಗಿಸಲು ಕ್ರಮಕೊಳ್ಳಬೇಕುಎಂದು ಕೋರಿದ್ದಾರೆ.
ಡಿ.ಟಿ ಶ್ರೀನಿವಾಸ್ ಅನೇಕ ಪದವಿಗಳನ್ನು ಪಡೆದು ಶಿಕ್ಷಣ ತಜ್ಞರಾಗಿದ್ದಾರೆ. ಅನೇಕ ಚುನಾವಣೆಗಳಲ್ಲಿ ತಮ್ಮ ಚಾಣಾಕ್ಷ ತಂತ್ರಗಳಿAದ ಯಶಸ್ಸು ಸಾಧಿಸಿದ್ದಾರೆ, ರಾಜ್ಯದಲ್ಲಿ ಹಿಂದುಳಿದ ಪ್ರವರ್ಗ-೧ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿ ಸುಮಾರು ೯೫ಕ್ಕೂ ಹೆಚ್ಚು ಅತಿ ಹಿಂದುಳಿದ ಸಮಾಜಗಳನ್ನು ಸಂಘಟಿಸಿ ಅವರನ್ನು ಮುನ್ನೆಲೆಗೆ ತರಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ಡಿ.ಟಿ.ಶ್ರೀನಿವಾಸ ರವರನ್ನು ಕರ್ನಾಟಕ ರಾಜ್ಯದಲ್ಲಿ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿಂದುಳಿದ ಸಮಾಜಗಳ ಪ್ರತಿನಿಧಿಯಾಗಿ ಸಚಿವ ಸ್ಥಾನ ನೀಡುವಂತೆ ಕರ್ನಾಟಕ ರಾಜ್ಯ (ಗೊಲ್ಲ) ಯಾದವ ಸಮಾಜದ ಒತ್ತಾಯವಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.
ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸಮುದಾಯ ಮಾತ್ರವಲ್ಲದೇ ಇಡೀ ಸಮಾಜವೇ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತಿರುವ ಡಿ.ಟಿ.ಶ್ರೀನಿವಾಸ್ರಿಗೆ ಸಚಿವ ಸ್ಥಾನ ನೀಡಲು ಯಾದವ ಸಂಘದ ಗೌರವ್ಯಾಧ್ಯಕ್ಷ ಗೋಕುಲ ನಾರಾಯಣಸ್ವಾಮಿ ಹಿರಿಯ ಮುಖಂಡರಾದ ಮುಕ್ಕಡ್ ವೆಂಕಟೇಶ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಣಿಯಾದವ್, ಕಾರ್ಯದರ್ಶಿ ನಾಗರಾಜ್,ತಾಲೂಕು ಅಧ್ಯಕ್ಷ ಅಮರನಾಥ್ ಯಾದವ್, ಜಿಲ್ಲಾ ಉಪಾಧ್ಯಕ್ಷ ದಿವಾಕರ್ ಯಾದವ್, ಕೆಎಂಕೆ.ಗೋಪಾಲ್. ಪಟೇಲ್ ಶ್ರೀನಿವಾಸ್ ಯಾದವ್. ಅಮ್ಮೆರಳ್ಳಿ ಮಂಜು, ಪ್ರಶಾಂತ್, ನಿತಿಶ್, ಚಾಕಾರಸನಹಳ್ಳಿ ರಾಕೇಶ್, ಮಂಜು ಹಾಗೂ ಪದಾಧಿಕಾರಿಗಳು ಹಾಗೂ ಜನಾಂಗದ ಹಿರಿಯ ನಾಯಕರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್