
ಸವದತ್ತಿ, 31 ಮೇ (ಹಿ.ಸ.) :
ಆ್ಯಂಕರ್ : ಮಲಪ್ರಭಾ ಜಲಾಶಯದ ಬಲದಂಡೆ ಕಾಲುವೆಯ ಸೈಫನ್ ದುರಸ್ತಿ ಕಾಮಗಾರಿ ವಿಳಂಬದಿಂದ ಉಂಟಾಗಿದ್ದ ಸಮಸ್ಯೆಗಳ ಹಿನ್ನೆಲೆಯಲ್ಲಿ ಧರಣಿ ನಡೆಸುತ್ತಿದ್ದ ರೈತರೊಂದಿಗೆ ಶಾಸಕ ವಿಶ್ವಾಸ ವೈದ್ಯ ಸುದೀರ್ಘ ಚರ್ಚೆ ನಡೆಸಿ, ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಬಳಿಕ ರೈತರು ತಮ್ಮ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಿಂಪಡೆದರು.
ಸವದತ್ತಿ ಹಾಗೂ ಯರಗಟ್ಟಿ ತಾಲೂಕುಗಳ ಸಮಗ್ರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರಿಗೆ ನ್ಯಾಯ ಒದಗಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ಮಲಪ್ರಭಾ ಬಲದಂಡೆ ಕಾಲುವೆಯ ಸೈಫನ್ ದುರಸ್ತಿ ವಿಳಂಬದಿಂದ ಶಿಂದೋಗಿ, ಮುನವಳ್ಳಿ, ಯಕ್ಕೇರಿ, ಹಿರೂರ, ಹಳ್ಳೂರ, ಭಂಡಾರಹಳ್ಳಿ, ತೆರೆದಕೊಪ್ಪ, ಬೋಚಬಾಳ ಹಾಗೂ ಮಾಂಗನೂರ ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪುವಲ್ಲಿ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವಿಶ್ವಾಸ ವೈದ್ಯ, ರೈತರೊಂದಿಗೆ ಚರ್ಚೆ ನಡೆಸಿ ಕಾಮಗಾರಿ ಸಂಬಂಧ ಮಹತ್ವದ ಬೆಳವಣಿಗೆಗಳನ್ನು ವಿವರಿಸಿದರು. ಸೈಫನ್ ದುರಸ್ತಿಗಾಗಿ ಅಂದಾಜು ₹19 ಕೋಟಿ ವೆಚ್ಚದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿದ್ದು, ಅಗತ್ಯ ಅನುದಾನ ಮಂಜೂರಾಗಿದೆ ಎಂದು ಅವರು ತಿಳಿಸಿದರು.
ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭವಾಗಲಿದ್ದು, ಈ ಬೃಹತ್ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಐದುರಿಂದ ಆರು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಹೇಳಿದರು.
ಆದರೆ ಕಾಮಗಾರಿ ವಿಳಂಬವಾಗದಂತೆ ಗುತ್ತಿಗೆದಾರರೊಂದಿಗೆ ವೈಯಕ್ತಿಕವಾಗಿ ಚರ್ಚಿಸಿ, ಮುಂದಿನ ಐದುರಿಂದ ಆರು ದಿನಗಳೊಳಗೆ ದುರಸ್ತಿ ಕಾರ್ಯಗಳನ್ನು ಆರಂಭಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿರುವುದರಿಂದ, ಕಾಮಗಾರಿ ಸುಗಮವಾಗಿ ನಡೆಯಲು ರೈತರು ಸಹಕರಿಸಬೇಕೆಂದು ಶಾಸಕ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈತರು ತಮ್ಮ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದರು.
ರೈತರ ಹಿತಾಸಕ್ತಿ ಹಾಗೂ ನೀರಾವರಿ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಬದ್ಧರಾಗಿದ್ದು, ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿಶ್ವಾಸ ವೈದ್ಯ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.