
ಗದಗ, 30 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಹೂಳೆಆಲೂರ ಗ್ರಾಮದಲ್ಲಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯ ರೇಷನ್ ಅಂಗಡಿಯಲ್ಲಿ ಕಳೆದ 10 ರಿಂದ 12 ದಿನಗಳಿಂದ ಸರ್ವರ್ ಸಮಸ್ಯೆ ಉಂಟಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ರಿ) ಹೂಳೆಆಲೂರ ಘಟಕದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಗ್ರಾಮದ ರೇಷನ್ ಅಂಗಡಿಗೆ ಆಹಾರ ಧಾನ್ಯ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ಪ್ರತಿದಿನವೂ “ಸರ್ವರ್ ಇಲ್ಲ”, “ನೆಟ್ ಸಮಸ್ಯೆ ಇದೆ” ಎಂಬ ಕಾರಣ ನೀಡಿ ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದ ದೈನಂದಿನ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡ ಕುಟುಂಬಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಂಟೆಗಟ್ಟಲೆ ರೇಷನ್ ಅಂಗಡಿಯ ಮುಂದೆ ಕಾಯುವಂತಾಗಿದೆ ಎಂದು ಸಂಘಟನೆ ತಿಳಿಸಿದೆ.
ಗ್ರಾಮದ ಅನೇಕ ಕುಟುಂಬಗಳು ಸರ್ಕಾರದ ಪಡಿತರ ವ್ಯವಸ್ಥೆಯನ್ನೇ ಅವಲಂಬಿಸಿದ್ದು, ಅವರಿಗೆ ತಿಂಗಳ ಪಡಿತರ ದೊರೆಯದಿರುವುದು ಆರ್ಥಿಕ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ. ಹಲವಾರು ಮಹಿಳೆಯರು, ವೃದ್ಧರು ಹಾಗೂ ಕೂಲಿ ಕಾರ್ಮಿಕರು ಬೆಳಿಗ್ಗೆಯಿಂದ ಸಂಜೆವರೆಗೂ ಕಾಯುತ್ತಿದ್ದರೂ ರೇಷನ್ ಪಡೆಯಲಾಗದೆ ನಿರಾಸೆಯಿಂದ ಮನೆಗೆ ಹಿಂತಿರುಗುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಾತನಾಡಿ, “ಒಂದು ಅಥವಾ ಎರಡು ದಿನ ಸಮಸ್ಯೆ ಉಂಟಾದರೆ ಸಹಜವಾಗಿ ಪರಿಗಣಿಸಬಹುದು. ಆದರೆ ಸತತ 10 ರಿಂದ 12 ದಿನಗಳಿಂದ ಇದೇ ಸಮಸ್ಯೆ ಮುಂದುವರಿಯುತ್ತಿರುವುದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸಾರ್ವಜನಿಕರ ಮೂಲಭೂತ ಹಕ್ಕಾದ ಆಹಾರ ಧಾನ್ಯ ವಿತರಣೆಯಲ್ಲಿ ಇಂತಹ ವಿಳಂಬ ಅಸಹ್ಯಕರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಬಡ ಜನತೆ ದಿನಗೂಲಿ ಕೆಲಸಗಳನ್ನು ಬಿಟ್ಟು ರೇಷನ್ ಅಂಗಡಿಯ ಮುಂದೆ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ಹೋಗದೇ ಇದ್ದರೆ ಆದಾಯವಿಲ್ಲ, ರೇಷನ್ ಪಡೆಯದಿದ್ದರೆ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗುವ ಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು.
ಸಂಬಂಧಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸರ್ವರ್ ಸಮಸ್ಯೆಯನ್ನು ಪರಿಹರಿಸಬೇಕು. ರೇಷನ್ ವಿತರಣೆ ವ್ಯವಸ್ಥೆಯನ್ನು ಸುಗಮಗೊಳಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಾದ ನಾಗರಾಜ ಕಂಠಿ, ಮಕಬುಲ್ ಬಸಾಪೂರ, ಹನುಮಂತ ಹಳ್ಳಿಕೇರಿ, ಕಲ್ಲಪ್ಪ ಸೊಬರದ, ಕಾರ್ತಿಕ ಬಡಿಗೇರ, ನಿಖಿಲ್ ಕಡಿಮನಿ, ಈಶಪ್ಪ ಅವರಾದಿ, ಗೋವಿಂದ ಬ್ಯಾಡದ, ರವಿ ಲಮಾಣಿ, ಗಂಗಾಧರ, ಯಚ್ಚರಪ್ಪ, ಬಸುರಾಜ ಪೂಜಾರ, ಯಚ್ಚರಪ್ಪ ಬಡಿಗೇರ, ದೀಪಕ, ಪ್ರಕಾಶ ಗಂಗೂರ, ಯಚ್ಚರಪ್ಪ ದಂಡಿನ, ಮಾರುತಿ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP