
ಗುವಾಹಟಿ, 30 ಮೇ (ಹಿ.ಸ.) :
ಆ್ಯಂಕರ್ : ಅಸ್ಸಾಂ ರಾಜ್ಯಪಾಲ ಲಕ್ಷ್ಮಣ ಪ್ರಸಾದ್ ಆಚಾರ್ಯ ಅವರು ಮಂಗೋಲಿಯಾದಲ್ಲಿ ನಡೆಯಲಿರುವ ಪವಿತ್ರ ಅವಶೇಷಗಳ ಪ್ರದರ್ಶನ ಕಾರ್ಯಕ್ರಮಕ್ಕೆ ತೆರಳಲಿರುವ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಭಗವಾನ್ ಬುದ್ಧರ ಪ್ರಮುಖ ಶಿಷ್ಯರಾದ ಅರಹಂತ ಸಾರಿಪುತ್ರ ಮತ್ತು ಅರಹಂತ ಮೌದ್ಗಲ್ಯಾಯನರ ಪವಿತ್ರ ಅವಶೇಷಗಳನ್ನು ಮಂಗೋಲಿಯಾಕ್ಕೆ ಕೊಂಡೊಯ್ಯಲಾಗುತ್ತಿದೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಡಿ, ಮಧ್ಯಪ್ರದೇಶದ ಸಾಂಚಿ ವಿಹಾರ ಚೈತ್ಯದಲ್ಲಿ ಸಂರಕ್ಷಿಸಲ್ಪಟ್ಟಿರುವ ಪವಿತ್ರ ಅವಶೇಷಗಳನ್ನು ಜೂನ್ 9ರವರೆಗೆ ಮಂಗೋಲಿಯಾದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ.
ಈ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ದೇಶ ಭಾರತ ಮತ್ತು ಮಂಗೋಲಿಯಾ ನಡುವಿನ ಶತಮಾನಗಳಷ್ಟು ಹಳೆಯ ಬೌದ್ಧ ಧರ್ಮ ಹಾಗೂ ನಾಗರಿಕತೆಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದಾಗಿದೆ. ವಿಶ್ವ ಪರಂಪರೆ ತಾಣವಾಗಿರುವ ಸಾಂಚಿ ಸ್ತೂಪಕ್ಕೆ ಸಂಬಂಧಿಸಿದ ಈ ಪವಿತ್ರ ಅವಶೇಷಗಳು ವಿಶ್ವದಾದ್ಯಂತದ ಬೌದ್ಧ ಭಕ್ತರಿಗೆ ಅಪಾರ ಭಕ್ತಿಯ ಸಂಕೇತವಾಗಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಉಪಕ್ರಮದಡಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಾರತ ಮತ್ತು ಮಂಗೋಲಿಯಾ ನಡುವಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಗುರಿ ಹೊಂದಿದೆ. ಬೌದ್ಧ ಜಗತ್ತಿನಲ್ಲಿ ಮಂಗೋಲಿಯಾವನ್ನು ಭಾರತದ ಆಧ್ಯಾತ್ಮಿಕ ನೆರೆಹೊರೆಯ ರಾಷ್ಟ್ರವೆಂದು ಪರಿಗಣಿಸಲಾಗುತ್ತದೆ.
ರಾಜ್ಯಪಾಲ ಲಕ್ಷ್ಮಣ ಪ್ರಸಾದ್ ಆಚಾರ್ಯ ಅವರು ಶನಿವಾರ ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ಪವಿತ್ರ ಅವಶೇಷಗಳನ್ನು ಹೊತ್ತ ಭಾರತೀಯ ನಿಯೋಗದೊಂದಿಗೆ ಮಂಗೋಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಪ್ರದರ್ಶನದ ವೇಳೆ ಸಾವಿರಾರು ಭಕ್ತರು, ಬೌದ್ಧ ಭಿಕ್ಷುಗಳು, ವಿದ್ವಾಂಸರು ಹಾಗೂ ಆಧ್ಯಾತ್ಮಿಕ ಅನುಯಾಯಿಗಳು ಪವಿತ್ರ ಅವಶೇಷಗಳ ದರ್ಶನ ಪಡೆದು ಗೌರವ ನಮನ ಸಲ್ಲಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಭಾರತ ಮತ್ತು ಮಂಗೋಲಿಯಾ ನಡುವಿನ ಹಂಚಿಕೆಯ ಬೌದ್ಧ ಪರಂಪರೆ ಹಾಗೂ ಗಾಢ ಸ್ನೇಹದ ಪ್ರತೀಕವೆಂದು ಪರಿಗಣಿಸಲಾಗಿದ್ದು, ಎರಡೂ ರಾಷ್ಟ್ರಗಳ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ಆಯಾಮ ನೀಡಲಿದೆ. ರಾಜ್ಯಪಾಲರು ಜೂನ್ 3ರಂದು ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.