
ನವದೆಹಲಿ, 03 ಮೇ (ಹಿ.ಸ.) :
ಆ್ಯಂಕರ್ : ರಾಷ್ಟ್ರ ರಾಜಧಾನಿ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವು ಜನರನ್ನು ರಕ್ಷಿಸಲಾಗಿದೆ. ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಸಂಭವಿಸಿದ ಈ ಅಗ್ನಿ ಅನಾಹುತವು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.
ಮುಂಜಾನೆ ಸುಮಾರು 3.48ರ ಸುಮಾರಿಗೆ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಮೂಲಕ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾಹಿತಿ ಪಡೆದ ತಕ್ಷಣವೇ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಸಂಭವಿಸಿದ ಕಟ್ಟಡವು ವಿವೇಕ್ ವಿಹಾರ್ ಹಂತ-1ರ ಬಿ-13 ವಿಳಾಸದಲ್ಲಿದೆ.
ಅಗ್ನಿ ಎರಡನೇ, ಮೂರನೇ ಹಾಗೂ ನಾಲ್ಕನೇ ಮಹಡಿಗಳಿಗೂ ವೇಗವಾಗಿ ಹರಡಿದ್ದು, ಕಟ್ಟಡದೊಳಗೆ ಸಿಲುಕಿದ್ದವರು ಹೊರಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗ್ನಿಶಾಮಕ ದಳವು ಸುಮಾರು 12 ಅಗ್ನಿಶಾಮಕ ವಾಹನಗಳ ಸಹಾಯದಿಂದ ಹಲವಾರು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿತು.
ರಕ್ಷಣಾ ಕಾರ್ಯಾಚರಣೆಯ ವೇಳೆ ಸುಮಾರು 10 ರಿಂದ 15 ಮಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಒಂಬತ್ತು ಮಂದಿ ಸುಟ್ಟ ಸ್ಥಿತಿಯಲ್ಲಿ ಮೃತರಾಗಿರುವುದು ದೃಢಪಟ್ಟಿದೆ. ಮೃತರ ಗುರುತಿನ ಪ್ರಕ್ರಿಯೆ ಮುಂದುವರಿದಿದೆ.
ಅಗ್ನಿಶಾಮಕ ಇಲಾಖೆಯ ಪ್ರಕಾರ, ಮೃತದೇಹಗಳಲ್ಲಿ ಒಂದು ಮೊದಲ ಮಹಡಿಯಿಂದ, ಐದು ಎರಡನೇ ಮಹಡಿಯಿಂದ ಹಾಗೂ ಮೂರು ಮೃತದೇಹಗಳು ಮೆಟ್ಟಿಲುಗಳ ಬಳಿ ಇರುವ ಬೀಗ ಹಾಕಿದ ಕೊಠಡಿಯಿಂದ ಪತ್ತೆಯಾಗಿವೆ. ಕೆಲವು ಮಂದಿ ಹೊಗೆ ಮತ್ತು ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿ ಕಟ್ಟಡದ ಹಲವು ಫ್ಲ್ಯಾಟ್ಗಳಿಗೆ ಹರಡಿದ್ದು, ಮನೆಬಳಕೆಯ ವಸ್ತುಗಳು ಬೆಂಕಿಯನ್ನು ಮತ್ತಷ್ಟು ತೀವ್ರಗೊಳಿಸಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ಬೆಂಕಿ ಎಸಿ ಘಟಕದ ಸ್ಫೋಟದಿಂದ ಉಂಟಾಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಶಾರ್ಟ್ ಸರ್ಕ್ಯೂಟ್ ಸೇರಿದಂತೆ ಹಲವು ಸಾಧ್ಯತೆಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಕಟ್ಟಡದ ಅಗ್ನಿ ಸುರಕ್ಷತಾ ವ್ಯವಸ್ಥೆ, ನಿರ್ಮಾಣ ಮಾನದಂಡಗಳು ಹಾಗೂ ಭದ್ರತಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa